ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ – ಶೇ 61.88 ರಷ್ಟು ವಿದ್ಯಾರ್ಥಿಗಳು ಪಾಸ್..
ರಾಜ್ಯ ಪದವಿ ಪೂರ್ಣ ಶಿಕ್ಷಣ ಇಲಾಖೆ ನಡೆಸಿರುವ ಪ್ರಸಕ್ತ 2022ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ(2nd PUC results) ಪ್ರಕಟಗೊಂಡಿದೆ. ಈ ಬಾರಿ ಶೇಕಡಾ 61.88ರಷ್ಟು ಫಲಿತಾಂಶ ಬಂದಿದೆ.
ಒಟ್ಟೂ 6,83,563 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು ಅವರಲ್ಲಿ 4,22,966 ವಿದ್ಯಾರ್ಥಿಗಳು(ಶೇ.61.88 ) ಉತ್ತೀರ್ಣರಾಗಿದ್ದಾರೆ. ಪೂರಕ ಪರೀಕ್ಷೆಯ ದಿನಾಂಕವನ್ನು ಈ ತಿಂಗಳಾಂತ್ಯಕ್ಕೆ ಪ್ರಕಟಿಸಲಾಗುವುದು ಎಂದು ಶಿಕ್ಷಣ ಸಚಿವ ಬಿಸಿ ನಾಗೇಶ್ ಟ್ವೀಟ್ ಮಾಡಿದ್ದಾರೆ.
ಜಿಲ್ಲಾವಾರು ಫಲಿತಾಂಶದಲ್ಲಿ ದಕ್ಷಿಣ ಕನ್ನಡ (88.02) ಮೊದಲ ಸ್ಥಾನ ಪಡೆದಿದ್ದರೆ, ಉಡುಪಿ ಜಿಲ್ಲೆ ( 86.38) ಎರಡನೇ ಸ್ಥಾನ ಪಡೆದಿದೆ.ವಿಜಯಪುರ ಮೂರನೇ ಸ್ಥಾನ, ಬೆಂಗಳೂರು ದಕ್ಷಿಣ 4, ಉತ್ತರ ಕನ್ನಡ 5 ನೇ ಸ್ಥಾನ ಗಳಿಸಿದರೆ ಶೇ 49.31 ಫಲಿತಾಂಶ ಪಡೆದಿರುವ ಚಿತ್ರದುರ್ಗ ಕೊನೆಯ ಸ್ಥಾನದಲ್ಲಿದೆ.
ವಿಜ್ಞಾನ ವಿಭಾಗದಲ್ಲಿ ಹೆಚ್ಚು ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದು ಎಂದಿನಂತೆ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. ಶೇಕಡಾ 68.72ರಷ್ಟು ಬಾಲಕಿಯರು ಮತ್ತು ಶೇಕಡಾ 55.22ರಷ್ಟು ಬಾಲಕರು ತೇರ್ಗಡೆ ಹೊಂದಿದ್ದಾರೆ.
ಗ್ರಾಮಾಂತರ ಭಾಗದಲ್ಲಿ ಶೇಕಡಾ 62.18 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದರೆ, ನಗರ ಪ್ರದೇಶದಲ್ಲಿ ಶೇಕಡಾ 61.78 ವಿದ್ಯಾರ್ಥಿಗಳು ಪಾಸಾಗಿದ್ದಾರೆ.