ಮೈಸೂರು: ಪ್ರಧಾನಿ ನರೇಂದ್ರ ಮೋದಿ ಅವರು ಕಾಂಗ್ರೆಸ್ ಸರ್ಕಾರದ ವಿರುದ್ಧ ಗಂಭೀರ ಆರೋಪವೊಂದನ್ನು ಮಾಡಿದ್ದು, ಕರ್ನಾಟಕ (Karnataka) ಭಾರತದ (India) ಭಾಗ ಅಲ್ಲ ಎಂದು ಕಾಂಗ್ರೆಸ್ ಹೇಳುತ್ತಿದೆ ಎಂದು ಆರೋಪಿಸಿದ್ದಾರೆ.
ನಂಜನಗೂಡಿನಲ್ಲಿ (Nanjanagudu) ಬಿಜೆಪಿ ಸಮಾವೇಶದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ನವರು ಈ ರಾಜ್ಯವನ್ನು ಭಾರತದಿಂದ ಬೇರೆ ಮಾಡಲು ಹೊರಟಿದ್ದಾರೆ. ಇದನ್ನು ಕನ್ನಡಿಗ ಸ್ವಾತಂತ್ರ್ಯ ಹೋರಾಟಗಾರರಿಗೆ ಅನ್ಯಾಯ ಮಾಡಿದಂತೆ. ಕರ್ನಾಟಕ ಪ್ರತಿಯೊಬ್ಬರಿಗೆ ತಾಯಿ ಸಮಾನ. ಭಾರತಮಾತೆಯ ಮಗಳಾಗಿ ವರ್ಣಿಸಲಾಗಿದೆ. ನಾನು ಪ್ರತಿಯೊಬ್ಬ ಕನ್ನಡಿಗರ ಭಾವನೆ ಅರ್ಥ ಮಾಡಿಕೊಂಡಿದ್ದೇನೆ.
ಸಂಸ್ಕೃತಿಯನ್ನು ಅಪಮಾನಿಸುವುದು ಕಾಂಗ್ರೆಸ್‌ನ ಸಂಸ್ಕೃತಿಯಾಗಿದೆ. ಈ ಕಾಂಗ್ರೆಸ್ ಪಕ್ಷವು ರಾಜ್ಯ ರಾಜ್ಯಗಳ ನಡುವೆ ಗಲಾಟೆ ಮಾಡಿಸುತ್ತಿದೆ. ಈಗ ಕರ್ನಾಟಕವನ್ನೇ ಭಾರತದಿಂದ ಪ್ರತ್ಯೇಕಿಸಲು ಪ್ರಯತ್ನಿಸುತ್ತಿದೆ. ಹೀಗಾಗಿ ರಾಜ್ಯದ ಜನರು ಮೇ 10ಕ್ಕೆ ಕಾಂಗ್ರೆಸ್ ಗೆ ಉತ್ತರ ನೀಡಬೇಕು ಎಂದು ಹೇಳಿದ್ದಾರೆ.
ಸದ್ಯ ಭಾರತ ದೇಶವು ಬೇರೆ ರಾಷ್ಟ್ರದ ಯಾವ ಸವಾಲಿಗೂ ಸಿದ್ಧ. ಆದರೆ, ಕಾಂಗ್ರೆಸ್ ಪಕ್ಷವು ಯಾವಾಗಲೂ ಭಯೋತ್ಪದಾಕರ ಬೆಂಬಲಕ್ಕೆ ನಿಲ್ಲುತ್ತದೆ. ಇದೆಲ್ಲಾ ಕಾರಣದಿಂದ ಮತ ಹಾಕುವಾಗ ನೆನಪಿಡಿ. ಎಲ್ಲಿ ಆತಂಕವಾದ ಅಪರಾಧಕ್ಕೆ ಪ್ರೋತ್ಸಾಹ ಸಿಗುತ್ತೋ ಅಲ್ಲಿ ಸರ್ವನಾಶವಾಗುತ್ತದೆ. ಬಂಡವಾಳ ಬರುವುದು ಕಾನೂನು ಸುವ್ಯವಸ್ಥೆ ಇರುವ ಕಡೆಗೆ. ಇಂತಹ ವಿಚಾರವನ್ನು ದೇಶ ಕ್ಷಮಿಸುವುದಿಲ್ಲ. ಕರ್ನಾಟಕವನ್ನು ನಂಬರ್ 1 ಮಾಡಲು ಬಿಜೆಪಿಗೆ ಮತ ನೀಡಿ ಎಂದು ಮನವಿ ಮಾಡಿದರು.






