ಬಳ್ಳಾರಿ : ಬಿ.ಎಸ್. ಯಡಿಯೂರಪ್ಪ (Yediyurappa) ಹಾಗೂ ಬಸವರಾಜ ಬೊಮ್ಮಾಯಿ (Basavaraj Bommai) ಅವರ ನಾಯಕತ್ವಕ್ಕೆ ಕೇವಲ ಮೂರೂವರೆ ವರ್ಷ ಆಡಳಿತ ಮಾಡುವ ಅವಕಾಶ ಸಿಕ್ಕಿದೆ. ಆದರೆ ಕಾಂಗ್ರೆಸ್ (Congress) ಸರ್ಕಾರ ಇದ್ದಾಗ ಅಭಿವೃದ್ಧಿ ಬದಲಾಗಿ ಭ್ರಷ್ಟಾಚಾರಕ್ಕೆ ಆದ್ಯತೆ ನೀಡಿದ್ದರು ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ವಾಗ್ದಾಳಿ ನಡೆಸಿದ್ದಾರೆ.
ಬಳ್ಳಾರಿಯಲ್ಲಿ ಬಿಜೆಪಿ (BJP)ಯ ಬಹಿರಂಗ ಸಮಾವೇಶದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷವು ಅಭಿವೃದ್ಧಿಗೆ ಆದ್ಯತೆ ನೀಡದೆ ಭ್ರಷ್ಟಾಚಾರಕ್ಕೆ ಪ್ರಾಮುಖ್ಯತೆ ಕೊಟ್ಟಿತ್ತು. ಇದಕ್ಕೆ ಕಾರಣವೇನು? ಕಾಂಗ್ರೆಸ್ನ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರೇ ತಮ್ಮ ಸರ್ಕಾರ ದೆಹಲಿಯಿಂದ 100 ಪೈಸೆ ಕಳುಹಿಸಿದೆ, ಬಡವರಿಗೆ ತಲುಪಿದ್ದು ಕೇವಲ 15 ಪೈಸೆ ಎಂದು ಹೇಳಿದ್ದಾರೆ. ಒಂದು ರೀತಿಯಲ್ಲಿ ಕಾಂಗ್ರೆಸ್ ಶೇ. 85 ಕಮಿಷನ್ ಪಡೆದ ಪಕ್ಷ ಎಂದು ಅವರೇ ಒಪ್ಪಿಕೊಂಡಿದ್ದರು ಎಂದು ಹೇಳಿದ್ದಾರೆ.
ಚುನಾವಣೆ ಗೆಲ್ಲಲು ಕಾಂಗ್ರೆಸ್ ಹಣದ ಹೊಳೆ ಹರಿಸಿದೆ. ಹಣ ಹಂಚಿ ಚುನಾವಣೆ ಗೆದ್ದಿದೆ. ಕಾಂಗ್ರೆಸ್ ಸುಳ್ಳು ಸರ್ವೇ ಮಾಡಿಸಿದೆ. ಈ ಮೂಲಕ ಕಾಂಗ್ರೆಸ್ ಜನರ ದಾರಿ ತಪ್ಪಿಸುವ ಪ್ರಯತ್ನ ಮಾಡುತ್ತಿದೆ. ಕಾಂಗ್ರೆಸ್ ಸುಳ್ಳು ಗ್ಯಾರಂಟಿ ಕಾರ್ಡ್ ನೀಡಿದೆ. ಕಾಂಗ್ರೆಸ್ ನೀಡಿದ ಘೋಷಣೆ ಪತ್ರದಲ್ಲಿ ಸುಳ್ಳು ಹೇಳಿದೆ. ನಾವು ನೀಡಿದ ಸವಲತ್ತುಗಳನ್ನು ನಿಲ್ಲಿಸುವುದಾಗಿ ಹೇಳಿದೆ. ಬಜರಂಗಬಲಿ ಎಂದು ಹೇಳುವುದನ್ನು ಕಾಂಗ್ರೆಸ್ ಸಹಿಸುತ್ತಿಲ್ಲ. ಕರ್ನಾಟಕವನ್ನು ನಂಬರ್ ಒನ್ ಮಾಡಲು ನಾವು ನಿರ್ಧಾರ ಮಾಡಿದ್ದೇವೆ ಎಂದು ಹೇಳಿದ್ದಾರೆ.
ದೇಶದ ನಂಬರ್ ಒನ್ ರಾಜ್ಯವನ್ನಾಗಿ ಮಾಡಲು ಭದ್ರತಾ ವ್ಯವಸ್ಥೆ, ಕಾನೂನು ಮತ್ತು ಸುವ್ಯವಸ್ಥೆ ಅತ್ಯಂತ ಮುಖ್ಯ. ಕರ್ನಾಟಕವು ಭಯೋತ್ಪಾದನೆಯಿಂದ ಮುಕ್ತವಾಗಿರುವುದು ಅಷ್ಟೇ ಮುಖ್ಯ. ಬಿಜೆಪಿ ಯಾವಾಗಲೂ ಭಯೋತ್ಪಾದನೆ ವಿರುದ್ಧ ಕಠಿಣವಾಗಿದೆ ಎಂದು ಹೇಳಿದ್ದಾರೆ.
ನಾನು ನಿಮ್ಮ ಮನೆ ಮಗನಾಗಿ ದೆಹಲಿಯಲ್ಲಿ ಇರುವೆ. ನಿಮಗಾಗಿ ಮನೆ, ವಿದ್ಯುತ್, ಮೂಲಭೂತ ಸೌಲಭ್ಯಗಳನ್ನು ನೀಡಲು ನಾನು ಸಿದ್ಧನಿದ್ದೇನೆ.
ನಿಮ್ಮ ಪರವಾಗಿ ನಾನು ಕೆಲಸ ಮಾಡಲು 9 ವರ್ಷಗಳಿಂದ ಪ್ರಯಾಸಪಡುತ್ತಿದ್ದೇನೆ. ಆದಿವಾಸಿ ಸಮಾಜಕ್ಕೆ ಕಾಂಗ್ರೆಸ್ ಏನನ್ನೂ ಮಾಡಿಲ್ಲ. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಆದಿವಾಸಿ ಸಮಾಜದ ದೊಡ್ಡ ಪಾತ್ರ ಇದೆ. ಇದಕ್ಕೆ ಯೋಗದಾನಕ್ಕೆ ಕಾಂಗ್ರೆಸ್ ಬೆಲೆ ನೀಡಿಲ್ಲ. ನಾವು ಆದಿವಾಸಿ ಮಹಿಳೆಯನ್ನು ರಾಷ್ಟ್ರಪತಿ ಮಾಡಿದ್ದೇವೆ ಎಂದು ಹೇಳಿದ್ದಾರೆ.