ಕೋಲಾರ : ಪ್ರಧಾನಿ ನರೇಂದ್ರ ಮೋದಿ ಅವರು ನವ ಕರ್ನಾಟಕ ಸಂಕಲ್ಪ ಸಮಾವೇಶಕ್ಕಾಗಿ ರಾಜ್ಯಕ್ಕೆ ಆಗಮಿಸಿದ್ದಾರೆ. ಹೀಗಾಗಿ ರಾಜ್ಯದಲ್ಲಿ ಚುನಾವಣಾ ಕಾವು ರಂಗೇರಿದೆ. ಕೋಲಾರ (Kolar) ತಾಲೂಕಿನ ಕೆಂದಟ್ಟಿ ಬಳಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಸಮಾವೇಶದ ಪಕ್ಕದಲ್ಲೇ ನಿರ್ಮಾಣ ಮಾಡಲಾಗಿದ್ದ ಹೆಲಿಪ್ಯಾಡ್‌ನಲ್ಲಿ ಪ್ರಧಾನಿ ಮೋದಿ ಅವರನ್ನು ಬಿಜೆಪಿ (BJP) ನಾಯಕರು ಸ್ವಾಗತಿಸಿದರು. ಈ ಸಂದರ್ಭದಲ್ಲಿ ಕಾಲಿಗೆರಗಿದ ಕೆಜಿಎಫ್ ಬಿಜೆಪಿ ಮುಖಂಡ ಶ್ರೀನಿವಾಸ್‌ಗೆ ಮೋದಿ ಬೆನ್ನಿಗೆ ಗುದ್ದಿ ಇದು ಬಿಜೆಪಿ ಸಂಸ್ಕೃತಿಯಲ್ಲ ಎಂದು ಹೇಳಿದರು.
ಕಾರ್ಯಕ್ರಮದ ಸಂದರ್ಭದಲ್ಲಿ ಪ್ರಧಾನಿಗೆ ಸಂಸದ ಮುನಿಸ್ವಾಮಿ (Muniswamy) ಮೂರುವರೆ ಅಡಿ ಎತ್ತರದ 30 ಕೆ.ಜಿ ತೂಕದ ಬುದ್ದನ ಪ್ರತಿಮೆ ನೀಡಿದರು. ಮಾಜಿ ಸಚಿವ ವರ್ತೂರು ಪ್ರಕಾಶ್ (Varthur Prakash) ಕರಿ ಕಂಬಳಿ ಹೊದಿಸಿ ಗೌರವಿಸಿದರು. ಕಾರ್ಯಕ್ರಮದ ಸಂದರ್ಭದಲ್ಲಿಯೂ ಕಾಲಿಗೆ ಬಿದ್ದು ನಮಸ್ಕರಿಸಿದ ಮುಳಬಾಗಲು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶಿಗೇಹಳ್ಳಿ ಸುಂದರ್ ಹಾಗೂ ಇನ್ನಿತರರಿಗೆ ಮೋದಿ ತಲೆ ಭಾಗಿ ನಮಸ್ಕರಿಸಿದರು.