ಆತ್ಮವಂಚಕ ಸಿದ್ದರಾಮಯ್ಯ ಅವರ ಮಾತು ನಂಬಿಕೆಗೆ ಯೋಗ್ಯವೇ? : ಬಿಜೆಪಿ
ಬೆಂಗಳೂರು : “ದಲಿತ ಸಿಎಂ ಆದರೆ ಖುಷಿ, ನಾನು ದಲಿತನೇ” ಎಂಬ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆಗೆ ರಾಜ್ಯ ಬಿಜೆಪಿ ಕಿಡಿಕಾರಿದೆ.
ಈ ಕುರಿತು ಸರಣಿ ಟ್ವೀಟ್ ಗಳನ್ನು ಮಾಡಿರುವ ಬಿಜೆಪಿ, ಸಿದ್ದರಾಮಯ್ಯನವರೇ, ನೀವು ಪರೋಕ್ಷವಾಗಿ ಏನನ್ನು ಸ್ಥಾಪಿಸಲು ಹೊರಟಿದ್ದೀರಿ?
“ದಲಿತ ಸಿಎಂ ಆದರೆ ಖುಷಿ, ನಾನು ದಲಿತನೇ” ಎಂದು ಹೇಳುವ ಮೂಲಕ ಮತ್ತೊಮ್ಮೆ ನಾನೇ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಪ್ರತಿಪಾದಿಸಿದಂತಾಯ್ತು. ನಿಮ್ಮ ಈ ಸ್ವಾರ್ಥ ಜನರಿಗೆ ಅರ್ಥವಾಗುವುದಿಲ್ಲ ಎಂದು ಭಾವಿಸಿದ್ದೀರಾ ಎಂದು ಕುಟುಕಿದೆ.
ಸಿದ್ದರಾಮಯ್ಯ ಅವರಿಗೆ ದಲಿತ ಪರ ಕಾಳಜಿ ಇದ್ದರೆ ದಲಿತರೇ ಮುಖ್ಯಮಂತ್ರಿ ಎಂದು ಘೋಷಿಸಿ ಎಂದು ನಾವು ಆಗ್ರಹಿಸಿದ್ದೆವು.
ಆದರೆ ಸಿದ್ದರಾಮಯ್ಯ ಇಲ್ಲಿಯೂ ಬುರುಡೆ ಬಿಟ್ಟಿದ್ದಾರೆ. ದಲಿತರು ಸಿಎಂ ಆದರೆ ಸ್ವಾಗತವಂತೆ. ಆದರೆ ಅವರೂ ದಲಿತರಂತೆ. ಹಾಗಾದರೆ, ಸಿದ್ದರಾಮಯ್ಯ ಏನು ಹೇಳಿದಂತಾಯ್ತು ಎಂದು ಪ್ರಶ್ನಿಸಿದೆ.
ಆತ್ಮವಂಚಕ ಸಿದ್ದರಾಮಯ್ಯ ಅವರ ಮಾತು ನಂಬಿಕೆಗೆ ಯೋಗ್ಯವೇ? ಈ ಹಿಂದೆ ಇದೇ ನನ್ನ ಕೊನೆಯ ಚುನಾವಣೆ ಎಂದು ಘೋಷಿಸಿ ಎರಡು ಕಡೆ ಚುನಾವಣೆಗೆ ನಿಂತರು.
ಈಗ ದಲಿತರು ಸಿಎಂ ಆದರೆ ಸ್ವಾಗತ ಎನ್ನುತ್ತಿದ್ದಾರೆ. ಇವರನ್ನು ನಂಬಿದರೆ ದಲಿತರಿಗೆ ಮತ್ತೊಂದು ಮಹಾ ಅನ್ಯಾಯ ಎದುರಾಗುವುದರಲ್ಲಿ ಸಂಶಯವಿಲ್ಲ.
ಎಲ್ಲ ನಿಯಮಗಳಿಗೂ ಅಪವಾದವಿರುತ್ತದೆ. ಇದೊಂದು ನಿಯಮ. ಹೀಗಾಗಿ ಕೆಲವು ನಿಯಮಗಳಿಗೆ ಅಪವಾದ ಇರುವುದಿಲ್ಲ ಎಂಬ ತರ್ಕ ಪಂಡಿತನ ವಾದ ಗೊತ್ತೇ?
ಈ ಸಿದ್ದರಾಮಯ್ಯ ಅವರ ಕತೆಯೂ ಹೀಗೆಯೇ ಆಗಿದೆ. ದಲಿತರು ಸಿಎಂ ಆದರೆ ಸ್ವಾಗತ. ನಾನೂ ಒಬ್ಬ ದಲಿತ. ಹೀಗಾಗಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನಾನೇ ಮುಖ್ಯಮಂತ್ರಿ ಎಂದು ಬಿಜೆಪಿ ಟ್ವೀಟ್ ಮಾಡಿದೆ.









