Karnataka budget | ಗ್ರಾಮೀಣ ಜನತೆಗೆ ಭರ್ಜರಿ ಸಿಹಿಸುದ್ದಿ
ಬೆಂಗಳೂರು : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು 2,65,720 ಕೋಟಿ ರೂ. ಗಾತ್ರದ ರಾಜ್ಯ ಬಜೆಟ್ ಮಂಡಿಸಿದ್ದಾರೆ. ಈ ವೇಳೆ ಬೊಮ್ಮಾಯಿ ಅವರು ರಾಜ್ಯದ ಗ್ರಾಮೀಣ ಜನರಿಗೆ ಒಂದಿಷ್ಟು ಸಿಹಿಸುದ್ದಿಯನ್ನು ನೀಡಿದ್ದಾರೆ.
ಮುಖ್ಯವಾಗಿ ಬಸವರಾಜ ಬೊಮ್ಮಾಯಿ ಅವರು, ಗ್ರಾಮೀಣ ಪ್ರದೇಶಗಳಲ್ಲಿ ಮನೆ ಬಾಗಿಲಿಗೆ ಅತ್ಯುತ್ತಮ ವೈದ್ಯಕೀಯ ಸೇವೆ ಒದಗಿಸುವ ಸಲುವಾಗಿ ಬೀದರ್, ಚಾಮರಾಜನಗರ, ಹಾವೇರಿ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ `ಮುಖ್ಯಮಂತ್ರಿ ಆರೋಗ್ಯ ವಾಹಿನಿ’ ಎಂಬ ಹೊಸ ಯೋಜನೆಯಡಿ ಸಂಚಾರಿ ಕ್ಲಿನಿಕ್ ಗಳನ್ನು 11 ಕೋಟಿ ರೂ. ವೆಚ್ಚದಲ್ಲಿ ಸ್ಥಾಪಿಸಲಾಗುವುದು ಎಂದು ಘೋಷಣೆ ಮಾಡಿದರು.
ಆರ್ಥಿಕವಾಗಿ ಹಿಂದುಳಿದ ಕುರಿಗಾರರಿಗೆ ವಸತಿ ಸೌಕರ್ಯದ ಜೊತೆಗೆ ಕುರಿ ದೊಡ್ಡಿ ನಿರ್ಮಿಸಲು 5 ಲಕ್ಷ ರೂ ಸಹಾಯಧನ. ಕುರಿ,ಮೇಕೆ ಸಾಕಾಣೆದಾರರು, ವಲಸೆ ಕುರಿಗಾರರು ಆಕಸ್ಮಿಕ ಮರಣ ಹೊಂದಿದಲ್ಲಿ ಅವಲಂಬಿತ ಕುಟುಂಬವನ್ನು ಆರ್ಥಿಕ ಸಂಕಷ್ಟದಿಂದ ಪಾರುಮಾಡಲು 5 ಲಕ್ಷ ರೂ. ವಿಮಾ ಸೌಲಭ್ಯ ಒದಗಿಸಲಾಗುವುದು ಎಂದು ಸಿಎಂ ಬೊಮ್ಮಾಯಿ ತಿಳಿಸಿದ್ದಾರೆ.
ಅನುಗ್ರಹ ಕೊಡುಗೆ ಯೋಜನೆಯಡಿ ಆಕಸ್ಮಿಕ ಮರಣ ಹೊಂದಿದ 3-6 ತಿಂಗಳ ವಯಸ್ಸಿನ ಕುರಿ/ಮೇಕೆಗಳಿಗೆ ನೀಡುವ ಪರಿಹಾರ ಧನವನ್ನು 2,500 ರೂ.ಗಳಿಂದ 3,500 ರೂ.ಗೆ ಹೆಚ್ಚಿಸಲಾಗುವುದು. ನೂತನ 100 ಪಶುಚಿಕಿತ್ಸಾಲಯಗಳನ್ನು ಹಂತ ಹಂತವಾಗಿ ಪ್ರಾರಂಭಿಸಲಾಗುವುದು. ಕುರಿಗಾಹಿಗಳಿಗೆ 5 ಲಕ್ಷ ರೂ. ವಿಮಾ ಸೌಲಭ್ಯ, ರಾಜ್ಯದಲ್ಲಿ 7 ತಾಲೂಕಿನಲ್ಲಿ 100 ಹಾಸಿಗೆಗಳ ಆಸ್ಪತ್ರೆ ಸ್ಥಾಪನೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದ್ದಾರೆ.
karnataka-budget-door to door medical services under chief ministers health channel scheme