Karnataka Election 2023 | ಬಿಜೆಪಿ ಸರ್ಕಾರದಲ್ಲಿ ವಿಧಾನಸೌಧ ವ್ಯಾಪಾರ ಸೌಧ – ಪ್ರಿಯಾಂಕ್ ಖರ್ಗೆ
ಬೆಂಗಳೂರು : ಬಿಜೆಪಿ ಶಾಸಕರ ಕಚೇರಿ, ಮನೆಯಲ್ಲಿ 6 ಕೋಟಿಗೂ ಹೆಚ್ಚು ಅಕ್ರಮ ಹಣ ಪತ್ತೆಯಾಗಿದೆ. ಮತ್ತೊಬ್ಬ ಶಾಸಕರು ಭ್ರಷ್ಟಾಚಾರದಲ್ಲಿ ಅಪರಾಧಿ ಎಂದು ಹೈಕೋರ್ಟ್‌ನಲ್ಲಿ ತೀರ್ಮಾನವಾಗಿದೆ. ಇವರೆಲ್ಲರ ರಾಜೀನಾಮೆ ಪಡೆಯುವುದರ ಜೊತೆಗೆ ಮುಖ್ಯಮಂತ್ರಿಗಳು ಹಾಗೂ ಅವರ ಮಂತ್ರಿಗಳು ಕೂಡ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಪ್ರಿಯಾಂಕ್ ಖರ್ಗೆ ಆಗ್ರಹಿಸಿದ್ದಾರೆ.
ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಪ್ರಿಯಾಂಕ್ ಖರ್ಗೆ, ಬಿಜೆಪಿ ಸರ್ಕಾರದಲ್ಲಿ ವಿಧಾನಸೌಧ ವ್ಯಾಪಾರ ಸೌಧವಾಗಿದೆ ಎಂದು ನಾವು ಹೇಳುತ್ತಲೇ ಇದ್ದೆವು. ಈ ಬಗ್ಗೆ ಸಾಕ್ಷಿ ಏನಿದೆ ಎಂದು ಸರ್ಕಾರ ನಮ್ಮ ಆರೋಪ ತಿರಸ್ಕರಿಸುತ್ತಾ ಬಂದಿತ್ತು. ಈಗ ರಾಜ್ಯದ 40% ಸರ್ಕಾರ ದೇಶದಲ್ಲೇ ಅತ್ಯಂತ ಭ್ರಷ್ಟ ಸರ್ಕಾರ ಎಂಬುದು ಲೋಕಾಯುಕ್ತ ದಾಳಿಯಿಂದ ಸಾಬೀತಾಗಿದೆ.
ಅಮಿತ್ ಶಾ, ನಡ್ಡಾ ಅವರು 40-50% ಕಮಿಷನ್ ಹೆಚ್ಚಳಕ್ಕೆ ಲಂಚ ಸಂಕಲ್ಪ ಯಾತ್ರೆ, ಭ್ರಷ್ಟೋತ್ಸವಕ್ಕಾಗಿ ರಾಜ್ಯಕ್ಕೆ ಬರುತ್ತಿದ್ದಾರೆ. ಲೋಕಾಯುಕ್ತ ದಾಳಿಯಲ್ಲಿ ಬಿಜೆಪಿ ಶಾಸಕರ ಕಚೇರಿ, ಮನೆಯಲ್ಲಿ 8 ಕೋಟಿಯಷ್ಟು ಅಕ್ರಮ ಹಣ ಸಿಕ್ಕಿದೆ. ಇಷ್ಟೊಂದು ಹಣ ಎಲ್ಲಿಂದ ಬರುತ್ತಿದೆ? ನಾವು PayCM, 40% ಸರ್ಕಾರ ಎಂದಿದ್ದು ತಪ್ಪೇ ಎಂದು ಪ್ರಶ್ನಿಸಿದ್ದಾರೆ.
ಮೈಸೂರು ಸ್ಯಾಂಡಲ್ ಸೋಪ್ ಕಾರ್ಖಾನೆಯಲ್ಲಿ ಅಕ್ರಮ ನಡೆದಿರುವ ಬಗ್ಗೆ ದೂರು ದಾಖಲಾಗಿದೆ. 800 ಕೋಟಿಗೂ ಹೆಚ್ಚು ಮೌಲ್ಯದ ಸಾಮಾಗ್ರಿಗಳನ್ನು ಮಾರುಕಟ್ಟೆ ದರಕ್ಕಿಂದ ಮೂರ್ನಾಲ್ಕು ಪಟ್ಟು ಹೆಚ್ಚು ಬೆಲೆಗೆ ಖರೀದಿಸಲಾಗಿದೆ! ಎಲೆಕ್ಷನ್‌ಗೆ ಕಲೆಕ್ಷನ್ ಮಾಡಲು ಈ ರೀತಿ ಖರೀದಿ ಮಾಡಿ ಗುತ್ತಿಗೆದಾರರಿಗೆ ಲಾಭ ಮಾಡಿಕೊಡುತ್ತಿದ್ದಾರೆ.
ರಾಜ್ಯ – ಕೇಂದ್ರ ಬಿಜೆಪಿ ನಾಯಕರು ಮೋದಿ, ಅಮಿತ್ ಶಾ ಹಾಗೂ ನಡ್ಡಾ ಅವರನ್ನು ಕೂರಿಸಿ ಒಂದೇ ಒಂದು ಮುಕ್ತ ಪತ್ರಿಕಾಗೋಷ್ಠಿ ನಡೆಸಲಿ. ಕಳೆದ 9 ವರ್ಷಗಳಲ್ಲಿ ಅವರ ಸಾಧನೆ ಏನು ಎಂದು ನಮ್ಮ ಮಾಧ್ಯಮ ಸ್ನೇಹಿತರಿಗೆ ತಿಳಿಸಲಿ. ಆದರೆ ಈ ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತರಿಗೆ ಪ್ರಶ್ನೆ ಕೇಳಲು ಮುಕ್ತ ಅವಕಾಶ ಇರಬೇಕು ಎಂದು ಸವಾಲ್ ಹಾಕಿದ್ದಾರೆ.