Karnataka | ಜೂನ್ 14ರ ವರೆಗೂ ರಾಜ್ಯದಲ್ಲಿ ಭಾರಿ ಮಳೆ
ಬೆಂಗಳೂರು : ಮುಂದಿನ ಮೂರು ದಿನಗಳ ಕಾಲ ರಾಜ್ಯದ ಕರಾವಳಿ ಮತ್ತು ದಕ್ಷಿಣ ಒಳನಾಡಿನಲ್ಲಿ ಭಾರಿ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಸದ್ಯ ಈ ಭಾಗದಲ್ಲಿ ತುಂತುರು ಮಳೆಯಾಗುತ್ತಿದ್ದು, ಕರಾವಳಿ ಹಾಗೂ ಮಲೆನಾಡಿನಲ್ಲಿ ಜೂನ್ 14ರ ತನಕ ಮಳೆ ಮುಂದುವರೆಯಲಿದೆ.
ಕಾರವಾರ, ತೀರ್ಥಹಳ್ಳಿ, ಸಾಗರ, ಕೊಪ್ಪ, ಭಟ್ಕಳ, ಅಂಕೋಲಾ, ಹೊನ್ನಾವರ, ಕುಮಟಾ, ಶಿರಸಿ ಮುಂತಾದೆಡೆ ನಿನ್ನೆಯಿಂದ ಮಳೆಯಾಗುತ್ತಿದ್ದು, ಜೂನ್ 14ರ ತನಕವೂ ಮಳೆ ಮುಂದುವರೆಯಲಿದೆ.

ಚಿಕ್ಕಮಗಳೂರು, ಹಾಸನ, ಶಿವಮೊಗ್ಗ, ಕೊಡಗು, ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಗುಡುಗು, ಮಿಂಚು ಸೇರಿದಂತೆ ಮಳೆಯಾಗಲಿದೆ ಎಂದು ಇಲಾಖೆ ಹೇಳಿದೆ.
ಈ ತಿಂಗಳ ಮೊದಲ ವಾರದಲ್ಲಿ ಕರ್ನಾಟಕಕ್ಕೆ ನೈಋತ್ಯ ಮುಂಗಾರು ಆಗಮಿಸಿದೆ.
ಇತ್ತ ಬೆಂಗಳೂರು ಸೇರಿದಂತೆ ಮೈಸೂರು ಭಾಗದಲ್ಲಿ ಮೋಡ ಮುಸುಕಿದ ವಾತಾವರಣ ನಿರ್ಮಾಣವಾಗಿದೆ.