Kashmir Files Vs Bachchan Pandey – ಬಾಕ್ಸ್ ಆಫೀಸ್ ಅಲ್ಲಿ ದೂಳೆಬ್ಬಿಸಿದ ಕಾಶ್ಮೀರ್ ಫೈಲ್ಸ್
ಬಾಲಿವುಡ್ ನಲ್ಲಿ ಈಗ ಎರಡು ಚಿತ್ರಗಳ ನಡುವೆ ಪೈಪೋಟಿ ನಡೆಯುತ್ತಿದೆ. ಒಂದು ಅಕ್ಷಯ್ ಕುಮಾರ್ ಅಭಿನಯದ ಬಚ್ಚನ್ ಪಾಂಡೆ ಇನ್ನೊಂದು ಕಾಶ್ಮೀರಿ ಪಂಡಿತರ ಹತ್ಯಾಕಾಂಡದ ಕುರಿತ ದಿ ಕಾಶ್ಮೀರ್ ಫೈಲ್ಸ್. ಕಾಶ್ಮೀರ ಫೈಲ್ಸ್ ಚಿತ್ರ ಬಿಡುಗಡೆಯಾಗಿ 13 ದಿನಗಳು ಕಳೆದಿವೆ, ಬಚ್ಚನ್ ಪಾಂಡೆ ಕಳೆದ ವಾರ ಬಿಡುಗಡೆಯಾಗಿತ್ತು. ಬಾಕ್ಸ್ ಆಫೀಸ್ ಗಳಿಕೆಯಲ್ಲಿ ಕಾಶ್ಮೀರ ಫೈಲ್ಸ್ ಬಚ್ಚನ್ ಪಾಂಡೆ ಸಿನಿಮಾವನ್ನ ಹಿಂದಿಕ್ಕಿದೆ.
ಚಿತ್ರದ ಸ್ಕ್ರಿಪ್ಟ್ ಮತ್ತು ಕಥೆಯಲ್ಲಿ ಹಿಡಿತವಿದ್ದರೆ ಪ್ರೇಕ್ಷಕರು ಥಿಯೇಟರ್ಗಳತ್ತ ಧಾವಿಸುತ್ತಾರೆ ಎಂಬುದನ್ನು ಕಾಶ್ಮೀರ ಫೈಲ್ಸ್ ಚಿತ್ರ ಸಾಬೀತುಪಡಿಸಿದೆ. ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರವು ಬುಧವಾರ ಸುಮಾರು 9 ಕೋಟಿ ರೂ. ಗಳಿಕೆ ಮಾಡಿದೆ. ಇಲ್ಲಿಯವರೆಗೆ ಬಾಕ್ಸ್ ಆಫೀಸ್ ನಲ್ಲಿ 199 ಕೋಟಿ ರೂ. ಗಳಿಸಿ ಮುನ್ನುಗ್ಗುತ್ತಿದೆ.
ಗುರುವಾರ, ಕಾಶ್ಮೀರ್ ಫೈಲ್ಸ್ ಭಾರತದ ಬಾಕ್ಸ್ ಆಫೀಸ್ 200 ಕೋಟಿಯನ್ನ ಗಳಿಸಿ ದಾಖಲೆ ನಿರ್ಮಿಸಲಿದೆ. ಹಿಂದಿಯಲ್ಲಿ ಸತತ 13 ನೇ ದಿನವೂ ಭರ್ಜರಿ ಬ್ಯುಸಿನೆಸ್ ಮಾಡಿದ ಚಿತ್ರಗಳ ಪೈಕಿ ‘ಬಾಹುಬಲಿ 2’ ಮೊದಲ ಸ್ಥಾನದಲ್ಲಿದೆ. ಕಾಶ್ಮೀರಕ್ಕೆ ಸಂಬಂಧಿಸಿದ ವಿಷಯದ ಮೇಲೆ ಅನೇಕ ಚಲನಚಿತ್ರಗಳು ತಯಾರಾಗಿವೆ. ಆದರೆ ‘ದಿ ಕಾಶ್ಮೀರ್ ಫೈಲ್ಸ್’ ಬಿರುಗಾಳಿಯನ್ನೆ ಎಬ್ಬಿಸಿದೆ.
ಬಚ್ಚನ್ ಪಾಂಡೆ ಆರಂಭಿಕ ದಿನವೇ ಕಾಶ್ಮೀರ ಫೈಲ್ಸ್ ವಿರುದ್ಧ ಸೋಲೊಪ್ಪಿತು. ಅಕ್ಷಯ್ ಕುಮಾರ್ ಅಭಿನಯದ ‘ಬಚ್ಚನ್ ಪಾಂಡೆ’ ಚಿತ್ರ ಬುಧವಾರದಂದು ಗಳಿಕೆಯಲ್ಲಿ ಕುಸಿತ ಕಂಡಿದೆ. ಮಂಗಳವಾರದಂದು ಸುಮಾರು ಮೂರು ಕೋಟಿ ಕಲೆಕ್ಷನ್ ಮಾಡಿದ್ದ ಈ ಚಿತ್ರ ಬುಧವಾರದಂದು ಅದಕ್ಕಿಂತಲೂ ಕಡಿಮೆ ಗಳಿಕೆ ಮಾಡಿದೆ. ಆರನೇ ದಿನವಾದ ಬುಧವಾರ ‘ಬಚ್ಚನ್ ಪಾಂಡೆ’ ಸುಮಾರು 2.70 ಕೋಟಿ ಕಲೆಕ್ಷನ್ ಮಾಡಿದೆ.
ಮೊದಲ ವಾರದ ಅಂತ್ಯಕ್ಕೆ 50 ಕೋಟಿ ಕಲೆಕ್ಷನ್ ಮಾಡಲು’ಬಚ್ಚನ್ ಪಾಂಡೆ’ ಹೆಣಗಾಡುತ್ತಿದೆ. ‘ಬಚ್ಚನ್ ಪಾಂಡೆ’ ಮೊದಲ ದಿನ 13.35 ಕೋಟಿ, ಎರಡನೇ ದಿನ 12 ಕೋಟಿ ಮತ್ತು ಮೂರನೇ ದಿನ ಅಂದರೆ ಭಾನುವಾರ 12 ಕೋಟಿ ಕಲೆಕ್ಷನ್ ಮಾಡಿದೆ. ಅಲ್ಲಿಂದೀಚೆಗೆ ಚಿತ್ರದ ಗಳಿಕೆಯಲ್ಲಿ ನಿರಂತರ ಕುಸಿತ ಕಂಡುಬಂದಿದೆ.