ದಂಪತಿ ನಡುವೆ ಮಗುವಿನ ಹೆಸರಿನ ವಿಚಾರವಾಗಿ ಜಗಳ ನಡೆದು, ಒಮ್ಮತ ಬಾರದ ಹಿನ್ನೆಲೆಯಲ್ಲಿ ಮಧ್ಯ ಪ್ರವೇಶಿಸಿದ ಕೋರ್ಟ್, ಮಗುವಿಗೆ ತಾನೇ ಹೊಸ ಹೆಸರನ್ನು ಸೂಚಿಸಿ ನಾಮಕರಣ ಮಾಡಿದೆ.
ಈ ಘಟನೆ ಕೇರಳದಲ್ಲಿ ನಡೆದಿದೆ. ಮಗು 2020ರಲ್ಲಿ ಜನಿಸಿತ್ತು. ಮಗು ಜನಿಸಿದ ನಂತರ ದಂಪತಿ ಬೇರೆ ಬೇರೆಯಾಗಿ ವಾಸಿಸುತ್ತಿದ್ದರಿಂದ ಮಗುವಿನ ಜನನ ಪ್ರಮಾಣ ಪತ್ರದಲ್ಲಿ ಹೆಸರು ನಮೂದಿಸಲು ಒಮ್ಮತ ಮೂಡಿರಲಿಲ್ಲ. ಹೀಗಾಗಿ ತಾಯಿಯು ಕೋರ್ಟ್ ಮೆಟ್ಟಿಲು ಹತ್ತಿದ್ದರು.
ನ್ಯಾ. ಬೇಚು ಕುರಿಯನ್ ಥಾಮಸ್ (Bechu Kurian Thomas) ಸೆ.5ರಂದು ನೀಡಿದ ಆದೇಶದಲ್ಲಿ ‘ತಾಯಿಯ ಬಳಿ ಮಗು ವಾಸಿಸುತ್ತಿರುವ ಕಾರಣ ಆಕೆ ಸೂಚಿಸಿದ ಹೆಸರಿಗೆ ಪ್ರಾಮುಖ್ಯತೆ ನೀಡಬೇಕಾಗುತ್ತದೆ.
ಪಿತೃತ್ವದ ವಿಚಾರದಲ್ಲಿ ಯಾವುದೇ ಗೊಂದಲ ಇಲ್ಲದಿರುವುದರಿಂದ ತಂದೆಯ ಹೆಸರನ್ನೂ ಮಗುವಿನೊಂದಿಗೆ ಸೇರಿಸಬೇಕು. ಬಯಕೆ ಅಥವಾ ಸಾಮಾಜಿಕ ಪ್ರಭಾವಗಳನ್ನು ಪರಿಗಣನೆಗೆ ತೆಗೆದುಕೊಳ್ಳಲಾಗುವುದಿಲ್ಲ. ಪೇರೆನ್ಸ್ ಪೇಟ್ರೀ ತತ್ವದ ಪ್ರಕಾರ ನ್ಯಾಯಾಲಯವೇ ಮಗುವಿಗೆ ಪ್ರತ್ಯೇಕ ಹೆಸರನ್ನು ಸೂಚಿಸುತ್ತದೆ ಎಂದು ಹೇಳಿದೆ. ಈ ಮೂಲಕ ಪುಣ್ಯ (Punya) ಎಂಬ ಹೆಸರು ನೀಡಿದ್ದು, ತಂದೆಯ ಹೆಸರೂ ಸೇರಿಸಿಕೊಳ್ಳುವಂತೆ ಸೂಚಿಸಿದೆ.