ಹಾವೇರಿ: ಖದೀಮರು ಕಳ್ಳತನಕ್ಕೆ ಬಂದು ಚಿನ್ನಾಭರಣ ದೋಚಿದ್ದಲ್ಲದೇ, ಊಟವನ್ನೂ ಮಾಡಿ ಕಳ್ಳರು ಪರಾರಿಯಾಗಿರುವ ಘಟನೆ ಜಿಲ್ಲೆಯ ರಾಣೇಬೆನ್ನೂರು (Ranebennur) ತಾಲೂಕಿನ ಚೌಡಯ್ಯದಾನಪುರು ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಪರಸಪ್ಪ ಎರೆಸೀಮೆ ಅವರ ಮನೆಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ 10 ಗ್ರಾಂ ಬೆಳ್ಳಿ ಆಭರಣ, 10 ಗ್ರಾಂ ಚಿನ್ನದ ಆಭರಣದ ಜೊತೆಗೆ 50 ಸಾವಿರ ರೂ. ಹಣ ದೊಚಿ ಪರಾರಿಯಾಗಿದ್ದಾರೆ. ಮನೆಯ ಬಾಗಿಲನ್ನು ಗುದ್ದಲಿಯಿಂದ ಒಡೆದು, ಮನೆಯೊಳಗೆ ನುಗ್ಗಿ ವಸ್ತುಗಳನ್ನೆಲ್ಲಾ ಚೆಲ್ಲಾಪಿಲ್ಲಿ ಮಾಡಿ, ಚಿನ್ನಾಭರಣವನ್ನು ದೋಚಿದ್ದಲ್ಲದೇ, ಊಟ ಮಾಡಿ ಪರಾರಿಯಾಗಿದ್ದಾರೆ.
ಕಷ್ಟಪಟ್ಟು ದುಡಿದು ಮುಂದಿನ ಜೀವನಕ್ಕಾಗಿ ಇಟ್ಟುಕೊಂಡಿದ್ದ ಹಣ, ಒಡವೆ ದೋಚಿದ್ದಾರೆ. ಕಳ್ಳರ ಚಲನವಲನಗಳು ಪಕ್ಕದ ಮನೆಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಕುರಿತು ರಾಣೇಬೆನ್ನೂರು ಗ್ರಾಮೀಣ ಪೋಲಿಸ್ ಠಾಣೆಯ ವ್ಯಾಪ್ತಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.