ಕಲ್ಯಾಣ ಮಂಟಪದೊಳಗೆ ನುಗ್ಗಿದ್ದ ಕಳ್ಳನೊಬ್ಬ ದೋಚಿ ಪರಾರಿಯಾಗಿ, ಸದ್ಯ ಪೊಲೀಸರ ಅತಿಥಿಯಾಗಿರುವ ಘಟನೆ ನಡೆದಿದೆ.
ಬೆಳಗಾವಿ ನಗರದಲ್ಲಿನ ಮಹಾಂತೇಶ್ ನಗರದ ವಾದಿರಾಜ್ ಕಲ್ಯಾಣ ಮಂಟಪದಲ್ಲಿ ಮದುವೆ ನಡೆದಿತ್ತು. ದಾವಣಗೆರೆ ಮೂಲದ ಪಂಚಾಕ್ಷರಿ-ಲತಾ ದಂಪತಿ ಮದುವೆಗೆ ಆಗಮಿಸಿದ್ದರು. ಲತಾ ಅವರು ತಾವು ಕುಳಿದ ಜಾಗದಲ್ಲಿಯೇ ತಮ್ಮ ಬ್ಯಾಗ್ ಇಟ್ಟು ವಧು-ವರರಿಗೆ ಆಶೀರ್ವದಿಸಲು ತೆರಳಿದ್ದರು. ಇದನ್ನು ಗಮನಿಸಿದ ಖದೀಮ, ಅದನ್ನು ಎಗರಿಸಿ ಪರಾರಿಯಾಗಿದ್ದಾನೆ. ಮರಳಿ ಬಂದ ಲತಾ ಅದನ್ನು ಗಮನಿಸಿದಾಗ ಬ್ಯಾಗ್ ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ. ಕೂಡಲೇ ಅವರು ಮಾಳಮಾರುತಿ ಠಾಣೆ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ. ಪ್ರಕರಣ ಭೇದಿಸಿದ ಪೊಲೀಸರು ಕೇವಲ 6 ಗಂಟೆಗಳಲ್ಲಿ ಆರೋಪಿಯನ್ನು ಬಂಧಿಸಿದ್ದಾರೆ.
ಆ ಬ್ಯಾಗ್ ನಲ್ಲಿ ಮೂರೂವರೆ ಲಕ್ಷ ರೂ. ಮೌಲ್ಯದ ಚಿನ್ನಾಭರಣ, ಮೂರೂವರೆ ಸಾವಿರ ನಗದು ಇತ್ತು ಎನ್ನಲಾಗಿದೆ. ಸದ್ಯ ಪೊಲೀಸರ ಕಾರ್ಯಕ್ಕೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.








