‘ವಿಕ್ರಾಂತ್ ರೋಣ’ ಚಿತ್ರೀಕರಣ ಮುಕ್ತಾಯ – ಚಿತ್ರತಂಡಕ್ಕೆ ಕಿಚ್ಚನ ಭಾವುಕ ವಿದಾಯ..!
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ಬಹುನಿರೀಕ್ಷೆಯ ‘ವಿಕ್ರಾಂತ್ ರೋಣ’ ಸಿನಿಮಾದ ಚಿತ್ರೀಕರಣ ಜುಲೈ 15ಕ್ಕೆ ಪೂರ್ಣಗೊಂಡಿದೆ. ಒಂದು ವರ್ಷಕ್ಕೂ ಹೆಚ್ಚು ಕಾಲ ಈ ಸಿನಿಮಾಕ್ಕಾಗಿ ತೊಡಗಿಸಿಕೊಂಡಿದ್ದ ಸುದೀಪ್ ಚಿತ್ರತಂಡಕ್ಕೆ ವಿದಾಯ ಹೇಳಿದ್ದಾರೆ. ಸಿನಿಮಾದ ಚಿತ್ರ ಹಂಚಿಕೊಂಡಿರುವ ಸುದೀಪ್ ‘ಈ ಚಿತ್ರದ ಮೂಲಕ ಸಿನಿಮಾ ಪ್ರಾರಂಭವಾಗಿತ್ತು. ಕಳೆದ ವರ್ಷ ಮಾರ್ಚ್ 02ಕ್ಕೆ ಸಿನಿಮಾ ಪ್ರಾರಂಭವಾಗಿತ್ತು. ಒಂದೂವರೆ ವರ್ಷದ ಬಳಿಕ ನಿನ್ನೆ ಚಿತ್ರೀಕರಣ ಮುಗಿಸಿದ್ದೇವೆ. ಚಿತ್ರತಂಡವನ್ನು ಹಾಗೂ ಸೆಟ್ ಗೆ ಹೋಗುವುದನ್ನು ನಾನು ಬಹುವಾಗಿ ಮಿಸ್ ಮಾಡಿಕೊಳ್ಳಲಿದ್ದೇನೆ’ ಎಂದು ಸಮಾಜಿಕ ಜಾಲತಾಣದ ಮೂಲಕ ಭಾವುಕವಾಗಿ ವಿದಾಯ ಹೇಳಿದ್ದಾರೆ.
ಅಲ್ಲದೇ ಸಿನಿಮಾದಲ್ಲಿ ವಿಶೇಷ ಹಾಡಿಗೆ ಹೆಜ್ಜೆ ಹಾಕಿರುವ ಬಾಲಿವುಡ್ ನಟಿ ಲಂಕಾ ಸುಂದರಿ ಜಾಕ್ವೆಲಿನ್ ಫರ್ನಾಂಡೀಸ್ ಗೂ ಸುದೀಪ್ ಧನ್ಯವಾದ ಹೇಳಿದ್ದಾರೆ. ‘ನಮ್ಮ ಸಿನಿಮಾದ ಹಾಡಿಗೆ ಜೋಶ್ ತುಂಬಿದ್ದಕ್ಕೆ ಧನ್ಯವಾದ ಜಾಕ್ವೆಲಿನ್ ಫರ್ನಾಂಡೀಸ್. ನಿಮ್ಮ ನೃತ್ಯ ನನ್ನನ್ನೂ ಒಂದೆರಡು ಸ್ಟೆಪ್ ಹಾಕುವಂತೆ ಪ್ರೇರೇಪಿಸಿತು. ನೀವು ಹೀಗೆ ಪ್ರೀತಿಯನ್ನು ಹಂಚುತ್ತಿರಿ. ನಿಮಗೆ ಶುಭವಾಗಲಿ’ ಎಂದಿದ್ದಾರೆ. ವಿಕ್ರಾಂತ್ ರೋಣ ಸಿನಿಮಾದಲ್ಲಿ ಸುದೀಪ್ ಜೊತೆಗೆ ಶ್ರದ್ಧಾ ಶ್ರೀನಾಥ್, ನಿರೂಪ್ ಭಂಡಾರಿ, ನೀತಾ ಅಶೋಕ್ ಹಾಗೂ ಇತರರು ನಟಿಸಿದ್ದಾರೆ. ಸಿನಿಮಾಗೆ ಅನೂಪ್ ಭಂಡಾರಿ ಆಕ್ಷನ್ ಕಟ್ ಹೇಳಿದ್ದಾರೆ..