ತವರಿನಲ್ಲಿ ನಡೆಯುತ್ತಿರುವ ಐಸಿಸಿ ಏಕದಿನ ವಿಶ್ವಕಪ್-2023 ಭರ್ಜರಿ ತಯಾರಿ ಮಾಡಿಕೊಂಡಿರುವ ಟೀಂ ಇಂಡಿಯಾದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ, ಚೆನ್ನೈನಲ್ಲಿ ನಡೆಯುವ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಎಂ.ಎಸ್. ಧೋನಿ ದಾಖಲೆ ಮುರಿಯುವ ಅವಕಾಶ ಸಿಕ್ಕಿದೆ.
ಟೀಂ ಇಂಡಿಯಾ ಅಕ್ಟೋಬರ್ 8ರಂದು ಚೆನ್ನೈನ ಚೆಪಾಕ್ ಅಂಗಳದಲ್ಲಿ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದ ಮೂಲಕ ವಿಶ್ವಕಪ್ ಅಭಿಯಾನ ಆರಂಭಿಸಲಿದೆ. ಆದರೆ ಚೆಪಾಕ್‌ನಲ್ಲಿ ನಡೆಯುವ ಈ ಪಂದ್ಯದಲ್ಲಿ ಟೀಂ ಇಂಡಿಯಾದ ಯಶಸ್ವಿ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಅವರ ಹೆಸರಿನಲ್ಲಿರುವ ದಾಖಲೆ ಮುರಿಯುವತ್ತ ಕಿಂಗ್ ಕೊಹ್ಲಿ ಕಣ್ಣಿಟ್ಟಿದ್ದಾರೆ.
ಚೆನ್ನೈನ ಚೆಪಾಕ್ ಮೈದಾನದಲ್ಲಿ ಏಕದಿನ ಕ್ರಿಕೆಟ್‌ನಲ್ಲಿ ಅತ್ಯಧಿಕ ರನ್‌ಗಳಿಸಿರುವ ಬ್ಯಾಟರ್‌ಗಳಲ್ಲಿ ಎಂ.ಎಸ್. ಧೋನಿ, ಆಡಿರುವ ಆರು ಪಂದ್ಯಗಳಲ್ಲಿ 100.25ರ ಸರಾಸರಿಯಲ್ಲಿ 401 ರನ್‌ಗಳಿಸಿದ್ದಾರೆ. ಕೂಲ್ ಕ್ಯಾಪ್ಟನ್ ಹೆಸರಿನಲ್ಲಿರುವ ಈ ದಾಖಲೆ ಬ್ರೇಕ್ ಮಾಡುವ ಅವಕಾಶ ಹೊಂದಿರುವ ಕೊಹ್ಲಿ, ಇದಕ್ಕಾಗಿ 65 ರನ್‌ಗಳಿಸಬೇಕಿದೆ. ಚೆಪಾಕ್‌ನಲ್ಲಿ ವಿರಾಟ್ ಕೊಹ್ಲಿ ಈವರೆಗೂ 8 ಏಕದಿನ ಪಂದ್ಯಗಳನ್ನ ಆಡಿದ್ದು, 42.12ರ ಬ್ಯಾಟಿಂಗ್ ಸರಾಸರಿಯಲ್ಲಿ 337 ರನ್‌ಗಳಿಸಿದ್ದಾರೆ.
ಹೀಗಾಗಿ ಆಸೀಸ್ ವಿರುದ್ಧದ ಪಂದ್ಯದಲ್ಲಿ ಧೋನಿ ಅವರ ಈ ದಾಖಲೆ ಮುರಿಯುವ ಅವಕಾಶ ಕೊಹ್ಲಿ ಅವರಿಗೆ ಲಭಿಸಿದೆ. ವಿಶ್ವಕಪ್ ಕ್ರಿಕೆಟ್ ಮಹಾಸಮರದಲ್ಲಿ ಅದ್ಭುತ ಪ್ರದರ್ಶನ ನೀಡುವ ನಿರೀಕ್ಷೆಯಲ್ಲಿರುವ ವಿರಾಟ್ ಕೊಹ್ಲಿ, ಮೊದಲ ಪಂದ್ಯದಲ್ಲೇ ಈ ದಾಖಲೆ ಮುರಿದರೆ ಅವರ ಆತ್ಮವಿಶ್ವಾಸ ಕೂಡ ಹೆಚ್ಚಾಗಲಿದೆ.