ಭಾರತ ಟಿ20 ಕ್ರಿಕೆಟ್ ತಂಡದ ನಾಯಕ ಸೂರ್ಯಕುಮಾರ್ ಯಾದವ್ (Suryakumar Yadav) ಭರ್ಜರಿ ದಾಖಲೆ ಬರೆದಿದ್ದಾರೆ.
ಕಿಂಗ್ ಕೊಹ್ಲಿಯ (Virat Kohli) ವಿಶ್ವ ದಾಖಲೆಯನ್ನು ಸರಿಗಟ್ಟುವ ಮೂಲಕ ದಾಖಲೆ ಬರೆದುವುದು ವಿಶೇಷವಾಗಿದೆ. ಶ್ರೀಲಂಕಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಸೂರ್ಯ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ. ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಸೂರ್ಯಕುಮಾರ್ ಯಾದವ್ 26 ಎಸೆತಗಳಲ್ಲಿ 2 ಭರ್ಜರಿ ಸಿಕ್ಸ್ ಹಾಗೂ 8 ಫೋರ್ಗಳೊಂದಿಗೆ 58 ರನ್ ಸಿಡಿಸಿದ್ದರು. ಈ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಫಲವಾಗಿ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿಯು ಸೂರ್ಯಕುಮಾರ್ ಪಾಲಾಯತು. ಈ ಮೂಲಕ ವಿರಾಟ್ ಕೊಹ್ಲಿ ಹೆಸರಿನಲ್ಲಿದ್ದ ವಿಶೇಷ ದಾಖಲೆಯನ್ನು ಸೂರ್ಯ ಸರಿಗಟ್ಟಿದ್ದಾರೆ.
ಟಿ20 ಕ್ರಿಕೆಟ್ನಲ್ಲಿ ಅತೀ ಹೆಚ್ಚು ಬಾರಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದ ವಿಶ್ವ ದಾಖಲೆ ವಿರಾಟ್ ಕೊಹ್ಲಿ ಹೆಸರಿನಲ್ಲಿತ್ತು. 125 ಟಿ20 ಪಂದ್ಯಗಳಲ್ಲಿ ಕಣಕ್ಕಿಳಿದಿರುವ ಕಿಂಗ್ ಕೊಹ್ಲಿ ಒಟ್ಟು 16 ಬಾರಿ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಗಳಿಸಿದ್ದರು. ಈಗ ಕೇವಲ ಕೇವಲ 69 ಪಂದ್ಯಗಳನ್ನಾಡಿರುವ ಸೂರ್ಯಕುಮಾರ್ ಯಾದವ್ ಈ ದಾಖಲೆ ಸರಿಗಟ್ಟಿದ್ದಾರೆ.
ಭಾರತದ ಪರ 69 ಟಿ20 ಪಂದ್ಯಗಳನ್ನಾಡಿರುವ ಸೂರ್ಯ ಇಲ್ಲಿಯವರೆಗೆ 16 ಬಾರಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದಿದ್ದಾರೆ. ಈ ಮೂಲಕ ವಿರಾಟ್ ಕೊಹ್ಲಿ ಹೆಸರಿನಲ್ಲಿದ್ದ ಪ್ಲೇಯರ್ ಆಫ್ ದಿ ಮ್ಯಾಚ್ ಅವಾರ್ಡ್ ದಾಖಲೆ ಸರಿಗಟ್ಟಿದ್ದಾರೆ. ಈಗ ವಿರಾಟ್ ಕೊಹ್ಲಿ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತಿ ಹೊಂದಿರುವ ಕಾರಣ ಸೂರ್ಯಕುಮಾರ್ ಯಾದವ್ ಅಗ್ರಸ್ಥಾನದಲ್ಲಿ ಮುಂದುವರೆಯುವುದು ಖಚಿತ ಎನ್ನಲಾಗುತ್ತಿದೆ. ಇನ್ನೊಂದೇ ಪಂದ್ಯದಲ್ಲಿ ಸೂರ್ಯ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರೆ, ಕಿಂಗ್ ದಾಖಲೆ ಮುರಿಯುವುದು ಶತಸಿದ್ಧ. ಹೀಗಾಗಿ ಅಭಿಮಾನಿಗಳು ಸಂತಸ ಪಡುತ್ತಿದ್ದಾರೆ. ಆದಷ್ಟು ಬೇಗ ಸೂರ್ಯ, ಕಿಂಗ್ ದಾಖಲೆ ಮುರಿಯಲಿ ಎಂಬುವುದು ಎಲ್ಲರ ಆಶಯವಾಗಿದೆ.








