IPL 2023 : ಇಂದು ನಡೆದ ಕೆಕೆಆರ್ ಹಾಗೂ ಗುಜರಾತ್ ಪಂದ್ಯದಲ್ಲಿ ಎರಡೆರಡು ದಾಖಲೆಗಳು ಮೂಡಿ ಬಂದಿವೆ. ಒಂದೇ ಪಂದ್ಯದಲ್ಲಿ ಹ್ಯಾಟ್ರಿಕ್ ವಿಕೆಟ್ ಬಿದರೆ, ಅದೇ ಪಂದ್ಯದ ಕೊನೆಯ ಓವರ್ ನಲ್ಲಿ 5 ಸಿಕ್ಸರ್ ಬಂದಿವೆ. ಈ ಮೂಲಕ ಕೆಕೆಆರ್ ಗೆಲುವು ಸಾಧಿಸಿದೆ.
ಅಹಮದಾಬಾದ್ನ ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದ ಕೆಕೆಆರ್ ತಂಡದ ಯುವ ಬ್ಯಾಟರ್ ರಿಂಕು ಸಿಂಗ್ ಹೀರೋ ಆಗಿದ್ದಾರೆ. ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಗುಜರಾತ್ ಟೈಟಾನ್ಸ್ ತಂಡವು ನಿಗದಿತ 20 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 204 ರನ್ ಗಳ ಬೃಹತ್ ಮೊತ್ತ ಕಲೆ ಹಾಕಿತ್ತು. ಈ ಬೃಹತ್ ಗುರಿ ಬೆನ್ನಟ್ಟಿದ ಕೆಕೆಆರ್ ತಂಡದ ಪರ ವೆಂಕಟೇಶ್ ಅಯ್ಯರ್ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದರು.
ಕೇವಲ 40 ಎಸೆತಗಳನ್ನು ಎದುರಿಸಿದ ವೆಂಕಟೇಶ್ ಅಯ್ಯರ್ 5 ಸಿಕ್ಸ್ ಹಾಗು 8 ಬೌಂಡರಿಗಳೊಂದಿಗೆ 83 ರನ್ ಗಳಿಸಿ ತಂಡಕ್ಕೆ ಉತ್ತಮ ಅಡಿಪಾಯ ಹಾಕಿದರು. ಈ ಹಂತದಲ್ಲಿ ಕೆಕೆಆರ್ ತಂಡಕ್ಕೆ ಗೆಲ್ಲಲು 4 ಓವರ್ಗಳಲ್ಲಿ 50 ರನ್ಗಳ ಗುರಿಯಿತ್ತು. ಆದರೆ 17ನೇ ಓವರ್ ಎಸೆದ ರಶೀದ್ ಖಾನ್ ಮೊದಲ ಎಸೆತದಲ್ಲೇ ಆ್ಯಂಡ್ರೆ ರಸೆಲ್ (1) ಅವರ ವಿಕೆಟ್ ಪಡೆದರು. ಎರಡನೇ ಎಸೆತದಲ್ಲಿಯೇ ಸುನಿಲ್ ನರೈಲ್ (0) ಕ್ಯಾಚ್ ನೀಡಿ ನಿರ್ಗಮಿಸಿದರು.
ಆ ಬಳಿಕ ಬಂದ ಶಾರ್ದೂಲ್ ಠಾಕೂರ್ (0) ಅವರನ್ನು ಎಲ್ಬಿ ಬಲೆಗೆ ಬೀಳಿಸುವ ಮೂಲಕ ರಶೀದ್ ಖಾನ್ ಹ್ಯಾಟ್ರಿಕ್ ಸಾಧನೆ ಮಾಡಿದರು. ಇದರೊಂದಿಗೆ ಇಡೀ ಪಂದ್ಯದ ಚಿತ್ರಣ ಬದಲಾಗಿ ಹೋಯಿತು. ಗೆಲ್ಲಬೇಕಿದ್ದ ಪಂದ್ಯದಲ್ಲಿ ಕೆಕೆಆರ್ ತಂಡವು ಸೋಲಿನತ್ತ ಹೆಜ್ಜೆ ಹಾಕಿತ್ತು.
ಕೊನೆಯ ಓವರ್ನಲ್ಲಿ ಕೆಕೆಆರ್ ತಂಡಕ್ಕೆ ಗೆಲ್ಲಲು 29 ರನ್ ಗಳ ಕಠಿಣ ಗುರಿಯಿತ್ತು. ಹಂಗಾಮಿ ನಾಯಕ ರಶೀದ್ ಖಾನ್, ಯಶ್ ದಯಾಳ್ ಕೈಗೆ ಬೌಲಿಂಗ್ ಮಾಡಲು ಹೇಳಿದರು. ಅತ್ತ ಸ್ಟ್ರೈಕ್ ನಲ್ಲಿದ್ದ ಉಮೇಶ್ ಯಾದವ್ ಸಿಂಗಲ್ ರನ್ ಪಡೆದರು. ಆ ಬಳಿಕ ನಡೆದಿದ್ದೆಲ್ಲವೂ ಇತಿಹಾಸ ಪುಟದಲ್ಲಿ ಸೇರಿತು.
ಸ್ಟ್ರೈಕ್ ಗೆ ಬಂದ ರಿಂಕು ಸಿಂಗ್ ಬ್ಯಾಕ್ ಟು ಬ್ಯಾಕ್ 4 ಸಿಕ್ಸ್ ಸಿಡಿಸಿದರು. ಪರಿಣಾಮ ಕೊನೆಯ ಎಸೆತದಲ್ಲಿ 4 ರನ್ಗಳ ಅವಶ್ಯಕತೆಯಿತ್ತು. ಈ ವೇಳೆ ಸ್ಟ್ರೈಟ್ ಹಿಟ್ ಸಿಕ್ಸ್ ಸಿಡಿಸುವ ಮೂಲಕ ರಿಂಕು ಸಿಂಗ್ ಕೆಕೆಆರ್ ತಂಡಕ್ಕೆ ರೋಚಕ ಜಯ ತಂದುಕೊಟ್ಟರು.
ರಣರೋಚಕ ಪಂದ್ಯದಲ್ಲಿ ಕೇವಲ 21 ಎಸೆತಗಳಲ್ಲಿ 6 ಭರ್ಜರಿ ಸಿಕ್ಸ್ ಹಾಗೂ 1 ಬೌಂಡರಿಯೊಂದಿಗೆ 48 ರನ್ ಬಾರಿಸಿದ ರಿಂಕು ಸಿಂಗ್ ಗೆಲುವಿನ ರುವಾರಿ ಎನಿಸಿಕೊಂಡರು. ಅಲ್ಲದೆ ಐಪಿಎಲ್ನ ಕೊನೆಯ ಓವರ್ನಲ್ಲಿ 5 ಸಿಕ್ಸ್ ಸಿಡಿಸಿ ಗೆಲುವು ತಂದುಕೊಟ್ಟ ವಿಶೇಷ ದಾಖಲೆಯನ್ನು ಅವರು ಬರೆದರು.








