Kodagu | ಬಾಕಿ ಇರುವ ಮನೆಗಳ ಹಸ್ತಾಂತರಕ್ಕೆ ಒಂದೂವರೆ ತಿಂಗಳ ಗಡುವು
ಮಡಿಕೇರಿ : ಕೊಡಗು Kodagu ಜಿಲ್ಲೆಯಲ್ಲಿ 2018ರಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪದ ಸಂದರ್ಭ ಮನೆ ಕಳೆದುಕೊಂಡಿರುವ ಕುಟುಂಬಗಳಿಗೆ ವಿತರಿಸಲು ಬಾಕಿ ಇರುವ ಮನೆಗಳನ್ನು ಒಂದೂವರೆ ತಿಂಗಳೊಳಗೆ ಪೂರ್ಣಗೊಳಿಸಿ ಹಸ್ತಾಂತರ ಮಾಡಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಚಿಸಿದ್ದಾರೆ.
ಮಡಿಕೇರಿಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಬೊಮ್ಮಾಯಿ, 2018-19 ರಲ್ಲಿ ನಿರ್ಮಿಸಬೇಕಿದ್ದ ಮನೆಗಳ ಪೈಕಿ 835 ಮನೆಗಳನ್ನು ಈಗಾಗಲೇ ನಿರ್ಮಿಸಲಾಗಿದೆ.
ಇದರಲ್ಲಿ ಕೆಲವು ಮಾನೆಗಳು ಮಾತ್ರ ಬಾಕಿ ಇದ್ದು, ಬಹುತೇಕ ಎಲ್ಲಾ ಮನೆಗಳಲ್ಲಿಯೂ ಜನ ವಾಸಿಸುತ್ತಿದ್ದಾರೆ.ಇನ್ಫೋಸಿಸ್ ವತಿಯಿಂದ ನಿರ್ಮಿಸುತ್ತಿರುವ 195 ಮನೆಗಳನ್ನು ಕೂಡಾ ಆದಷ್ಟು ಶೀಘ್ರವಾಗಿ ಪೂರ್ಣಗೊಳಿಸಿ ಹಸ್ತಾಂತರ ಮಾಡಲಾಗುವುದು ಎಂದು ಭರಸವೆ ನೀಡಿದರು.
ಮಳೆಯಿಂದ ಹಾನಿಗೊಳಗಾದ ಗ್ರಾಮೀಣ ಹಾಗೂ ಮುಖ್ಯ ರಸ್ತೆಗಳ ಅಭಿವೃದ್ಧಿಗೆ ಅಂದಾಜು ಪಟ್ಟಿ ಸಿದ್ಧಪಡಿಸಲು ಸೂಚಿಸಲಾಗಿದೆ. ಮೊದಲ ಹಂತದಲ್ಲಿ ತಕ್ಷಣ ದುರಸ್ತಿ ಮಾಡುವುದರೊಂದಿಗೆ ಎರಡನೇ ಹಂತದಲ್ಲಿ ಹಾಳಾಗಿರುವ ರಸ್ತೆಗಳನ್ನು ಪುನರ್ ನಿರ್ಮಿಸಲಾಗುವುದು ಎಂದು ನುಡಿದರು.

ಕೊಡಗು ಜಿಲ್ಲೆಯ ನಾಲ್ಕು ತಹಶೀಲ್ದಾರರ ಖಾತೆಗಳಲ್ಲಿ ತಲಾ 25 ಲಕ್ಷ ರೂ.ಗಳು ಲಭ್ಯವಿದೆ. ಪ್ರತಿ ಗ್ರಾಮ ಪಂಚಾಯಿತಿಗೆ 50 ಸಾವಿರ ರೂ.ಗಳನ್ನು ಈಗಾಗಲೇ ಒದಗಿಸಲಾಗಿದೆ.
ಕಾವೇರಿ ಮತ್ತು ಹಾರಂಗಿ ನದಿ ಪಾತ್ರದಲ್ಲಿ ಹೂಳು ತುಂಬಿದ್ದು,. ಅದರ ಜೊತೆಗೆ ನೀರಿನ ಹರಿವಿನಿಂದ ನೀರು ಹೊರಗೆ ಹರಿಯುತ್ತಿದೆ. ಇದನ್ನು ತಪ್ಪಿಸಲು ಹಾರಂಗಿ ಜಲಾಶಯದ ಹಿಂದಿನ ಪ್ರದೇಶದ ಹೂಳೆತ್ತಲು ಈಗಾಗಲೇ 40 ಕೋಟಿ ರೂ.ಗಳ ಮಂಜೂರಾತಿ ನೀಡಿದ್ದು, ಕೆಲಸ ಕೂಡಲೇ ಪ್ರಾರಂಭವಾಗುತ್ತದೆ.
ಹೂಳು, ಮಣ್ಣು ತೆಗೆಯುವುದು ಹಾಗೂ ಗೋಡೆ ನಿರ್ಮಾಣ ಕಾರ್ಯವನ್ನು ಇದು ಒಳಗೊಂಡಿದೆ. ಕಾವೇರಿ ನದಿಯಲ್ಲಿನ ಹೂಳು ತೆಗೆಯಲು ಕಾವೇರಿ ನೀರಾವರಿ ನಿಗಮಕ್ಕೆ ಸೂಚಿಸಲಾಗಿದೆ. ನೀರು ನಿಲ್ಲದಂತೆ ಮಾಡಲು ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ.
ಮರದ ದಿಮ್ಮಿಗಳನ್ನು ಕೂಡಲೇ ತೆರವು ಮಾಡುವಂತೆ ಅರಣ್ಯ ಇಲಾಖೆಗೆ ನಿರ್ದೇಶನ ನೀಡಲಾಗಿದೆ. ಕಳೆದ ಬಾರಿಯ ದಿಮ್ಮಿಗಳು ಹಾಗೆಯೇ ಉಳಿದುಕೊಂಡಿರುವ ಬಗ್ಗೆ ದೂರುಗಳು ಬಂದಿದ್ದು, ನದಿ ಪಾತ್ರದಲ್ಲಿ ಯಾವುದೇ ಮರದ ದಿಮ್ಮಿಗಳು ಇರಬಾರದು ಎಂದು ಸೂಚಿಸಲಾಗಿದೆ ಎಂದರು.