ಬೆಂಗಳೂರು : ವಿರಾಟ್ ಕೊಹ್ಲಿ ಹಾಗೂ ಫಾಫ್ ಡು ಪ್ಲೆಸಿಸ್ ಬೆಂಕಿ ಬ್ಯಾಟಿಂಗ್ ಗೆ ಮುಂಬಯಿ ತಂಡದ ವಿರುದ್ಧ ಆರ್ ಸಿಬಿ ಭರ್ಜರಿ ಜಯ ಸಾಧಿಸಿದೆ.
ಬೆಂಗಳೂರು ತಂಡವು 8 ವಿಕೆಟ್ ಗಳ ಭರ್ಜರಿ ಜಯ ಸಾಧಿಸಿದೆ. ಆರ್‌ಸಿಬಿ ತಂಡದ ನಾಯಕ ಫಾಫ್ ಡು ಪ್ಲೆಸಿಸ್ ಮತ್ತು ವಿರಾಟ್ ಕೊಹ್ಲಿ ಭರ್ಜರಿ ಬ್ಯಾಟಿಂಗ್ ನಡೆಸಿದರು. ಸಿಕ್ಸರ್, ಬೌಂಡರಿ ಸುರಿಮಳೆಗೈದು ಅಭಿಮಾನಿಗಳಿಗೆ ರಸದೌತಣ ನೀಡಿದರು.
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್ ಸಿಬಿ ವಿರುದ್ಧ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಮುಂಬಯಿ ಇಂಡಿಯನ್ಸ್ ತಂಡವು ನಿಗದಿತ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 171 ರನ್ ಗಳಿಸಿತ್ತು. 172 ರನ್‌ಗಳ ಗುರಿ ಬೆನ್ನತ್ತಿದ್ದ ಆರ್‌ಸಿಬಿ 16.2 ಓವರ್ ಗಳಲ್ಲಿಯೇ 2 ವಿಕೆಟ್ ನಷ್ಟಕ್ಕೆ 172 ರನ್ ಗಳಿಸಿ ಭರ್ಜರಿ ಜಯ ಸಾಧಿಸಿತು.
ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದ ವಿರಾಟ್ ಕೊಹ್ಲಿ ಹಾಗೂ ಪ್ಲೆಸಿಸ್ ಮೊದಲ ವಿಕೆಟ್ ಪತನಕ್ಕೆ 14.5 ಓವರ್‌ಗಳಲ್ಲಿ 148 ರನ್ ಗಳ ಜೊತೆಯಾಟ ನೀಡಿದ್ದರು. ಈ ಸಂದರ್ಭದಲ್ಲಿ ನಾಯಕ ಪ್ಲೆಸಿಸ್ ಸಿಕ್ಸರ್ ಸಿಡಿಸುವ ಬರದಲ್ಲಿ ಬೌಂಡರಿ ಲೈನ್ ಕ್ಯಾಚ್ ನೀಡಿ ಔಟಾದರು. 43 ಎಸೆತಗಳನ್ನು ಎದುರಿಸಿದ ಪ್ಲೆಸಿಸ್ 6 ಸಿಕ್ಸರ್, 5 ಬೌಂಡರಿಯೊಂದಿಗೆ 73 ರನ್ ಗಳಿಸಿದರು.
ನಂತರ ಬಂದ ದಿನೇಶ್ ಕಾರ್ತಿಕ್ ಮೂರೇ ಎಸೆತಗಳಲ್ಲಿ ರನ್ ಗಳಿಸದೇ ಕ್ಯಾಚ್ ನೀಡಿದರು. 3ನೇ ವಿಕೆಟ್‌ನಲ್ಲಿ ಜೊತೆಯಾದ ಮ್ಯಾಕ್ಸ್‌ವೆಲ್ ಭರ್ಜರಿ ಸಿಕ್ಸರ್, ಬೌಂಡರಿ ಸಿಡಿಸಿ ಗೆಲುವಿನ ಹಾದಿಗೆ ತಲುಪಿಸಿದರು. ಗ್ಲೇನ್ ಮ್ಯಾಕ್ಸ್‌ವೆಲ್ 3 ಎಸೆತಗಳಲ್ಲಿ 2 ಸಿಕ್ಸರ್ ಸಿಡಿಸಿ, 12 ರನ್ ಗಳಿಸಿದರೆ, ವಿರಾಟ್ ಕೊಹ್ಲಿ 49 ಎಸೆತಗಳಲ್ಲಿ ಅಜೇಯ 89 ರನ್ (6 ಬೌಂಡರಿ, 5 ಸಿಕ್ಸರ್) ಗಳಿಸಿ ಅಜೇಯರಾಗುಳಿದರು.








