ಕೊಪ್ಪಳ : ಕೊಪ್ಪಳದಲ್ಲಿ ದೇಶದ ಅತಿ ದೊಡ್ಡ ಬೊಂಬೆಗಳ ಕ್ಲಸ್ಟರ್ ನಡೆಯಲಿದ್ದು, ಈಗಾಗಲೇ ಎಲ್ಲ ರೀತಿಯ ಸಿದ್ಧತೆಗಳು ನಡೆದಿವೆ. ಮಾರ್ಕೆಟ್ ಆಗಿದ್ದು, ಅಂದಾಜು 1200 ಕೋಟಿ ರುಪಾಯಿ ಮಾರಾಟ ಆಗುವ ಅಂದಾಜು ಮಾಡಲಾಗಿದೆ. Aequs ಏರೋಸ್ಪೇಸ್ ಕಂಪೆನಿ ಕೊಪ್ಪಳದಲ್ಲಿ 400 ಎಕರೆಗೂ ಹೆಚ್ಚು ವ್ಯಾಪ್ತಿಯಲ್ಲಿ ಬೊಂಬೆಗಳಿಗೆ SEZ ಅಭಿವೃದ್ಧಿ ಪಡಿಸುತ್ತಿದೆ.
ಕಳೆದ ಸೋಮವಾರ ಕೊಪ್ಪಳಕ್ಕೆ ಜಾಗತಿಕ ಮಟ್ಟದ ಬೊಂಬೆ ತಯಾರಕರನ್ನು ಆಕರ್ಷಿಸುವ ಸಲುವಾಗಿ ಸರ್ಕಾರದಿಂದ ವರ್ಚುವಲ್ ಹೂಡಿಕೆದಾರರ ಸಭೆಯನ್ನು ನಡೆಸಲಾಗಿದೆ. ಇದರಲ್ಲಿ ಜಾಗತಿಕ ಮಟ್ಟದ ಹಲವಾರು ಬೊಂಬೆ ತಯಾರಕರು ಭಾಗವಹಿಸಿದ್ದರು.
ಬೊಂಬೆಗಳ ಕ್ಲಸ್ಟರ್ ಗೆ 5 ಸಾವಿರ ಕೋಟಿ ರುಪಾಯಿ ಬಂಡವಾಳ ಆಕರ್ಷಿಸುವ ಭರವಸೆ ಇದೆ. ಇದರಿಂದ ಮುಂದಿನ ಐದು ವರ್ಷದಲ್ಲಿ ನಲವತ್ತು ಸಾವಿರ ಉದ್ಯೋಗ ಸೃಷ್ಟಿ ಆಗಬಹುದು. ನವೆಂಬರ್ ನಿಂದ ಈ ಕ್ಲಸ್ಟರ್ ಕಾರ್ಯಾರಂಭ ಮಾಡಲಿದೆ ಎಂದು ಕರ್ನಾಟಕ ಸರ್ಕಾರದ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತಾ ಹೇಳಿದ್ದಾರೆ.
ಬೊಂಬೆಗಳ ಕ್ಲಸ್ಟರ್ ಅಭಿವೃದ್ಧಿಗೆ ಬೇಕಾದ ಎಲ್ಲ ವ್ಯವಸ್ಥೆಯನ್ನು ಸರ್ಕಾರ ಸೃಷ್ಟಿಸಿದ್ದು, ಬೆಂಗಳೂರು, ಧಾರವಾಡ, ತುಮಕೂರು ಹಾಗೂ ಮೈಸೂರಿನಲ್ಲಿ ಟೂಲ್ ಮ್ಯಾನುಫ್ಯಾಕ್ಚರಿಂಗ್ ಹಾಗೂ ಪ್ರಿಸಿಷಿನ್ ಇಂಜಿನಿಯರಿಂಗ್, ಪಾಲಿಮರ್ಸ್ ಮ್ಯಾನುಫ್ಯಾಕ್ಚರಿಂಗ್ ಕ್ಲಸ್ಟರ್ ಗಳನ್ನು ಆರಂಭಿಸಲು ಸರ್ಕಾರ ಬೆಂಬಲ ನೀಡಿದೆ. ರಚನೆ ಸಾಮಥ್ರ್ಯ, ಪರೀಕ್ಷೆ ಪ್ರಮಾಣ ಪತ್ರಗಳನ್ನು ಒದಗಿಸುವ ಸಂಸ್ಥೆಗಳನ್ನು ಬೆಂಗಳೂರು, ಧಾರವಾಡ ಹಾಗೂ ಕೊಪ್ಪಳದಲ್ಲಿ ಸ್ಥಾಪಿಸಲಾಗುವುದು. 2023ರ ಹೊತ್ತಿಗೆ ಬೊಂಬೆ ಕೈಗಾರಿಕೆ 2300 ಕೋಟಿ ವ್ಯವಹಾರವಾಗಿ ಬೆಳೆಯುವ ನಿರೀಕ್ಷೆ ಇದೆ ಎಂದು ಗುಪ್ತಾ ಹೇಳಿದ್ದಾರೆ.