ಮಾಜಿ ಸಚಿವ ಕೃಷ್ಣಬೈರೇಗೌಡ ಅವರು ಈಗಿರುವ ತಮ್ಮ ಕ್ಷೇತ್ರವನ್ನು ಬಿಟ್ಟು ಮತ್ತೆ ಚಿನ್ನದ ನಾಡು ಕೋಲಾರಕ್ಕೆ ಹೊರಡಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಈ ಬಗ್ಗೆ ಕಳೆದ ಚುನಾವಣೆಯಿಂದ ಊಹಾಪೋಹಗಳು ಹರಿದಾಡುತ್ತಿದ್ದು, ಇಂದು ವಿಧಾನಸಭೆಯಲ್ಲಿ ನಡೆದ ಘಟನೆ ಗಾಳಿ ಸುದ್ದಿಗೆ ಮತ್ತಷ್ಟು ಪುಷ್ಠಿ ನೀಡಿದೆ. ಇಂದಿನ ಅಧಿವೇಶನದಲ್ಲಿ ಇದಕ್ಕೆ ಪೂರಕ ಎಂಬಂತೆ ಶ್ರೀನಿವಾಸಪುರದ ಶಾಸಕ, ಮಾಜಿ ಸ್ಪೀಕರ್ ರಮೇಶ್ ಕುಮಾರ್ ಕೂಡ ಸದನದಲ್ಲಿ ಮಾತಾಡಿದ್ದಾರೆ.
ಕೆ.ಸಿ ವ್ಯಾಲಿ ವಿಚಾರಕ್ಕೆ ಚರ್ಚೆಯಲ್ಲಿ ರಮೇಶ್ ಕುಮಾರ್ ಮಾತನಾಡುತ್ತಾ ಈ ಹಿಂದೆ ಕೆ.ಸಿ.ವ್ಯಾಲಿ ಮೂಲಕ ಕೋಲಾರ ಜಿಲ್ಲೆಗೆ ನೀರು ಬಂದಾಗ ನಾನು ಕಣ್ಣೀರು ಹಾಕಿದ್ದೆ. ಆದ್ರೆ ದಿನ ಕಳೆದಂತೆ ಕೆ.ಸಿ.ವ್ಯಾಲಿಯ ನೀರು ಜಿಲ್ಲೆಗೆ ದೊರಕುತ್ತಿಲ್ಲ. ಇದರ ಬಗ್ಗೆ ನನಗೆ ಮಾತನಾಡಲು ಸಾಧ್ಯವಿಲ್ಲ. ನನ್ನ ಆಪ್ತ, ನನ್ನ ಚಿರಂಜೀವಿ ಕೃಷ್ಣಬೈರೇಗೌಡ ಮಾತಾಡ್ತಾರೆ ಎಂದ್ರು. ಅದರಂತೆ ಸದನದಲ್ಲಿ ಎದ್ದು ನಿಂತ ಕೃಷ್ಣಬೈರೇಗೌಡ ಅವರು ಕೆ.ಸಿ ವ್ಯಾಲಿ ಬಗ್ಗೆ ನಿರರ್ಗಳವಾಗಿ ಮಾತನಾಡಿದ್ರು. ಇದು ಸದನದಲ್ಲಿ ನೆರೆದಿದ್ದವರ ಗಮನ ಸೆಳೆಯಿತು.
ಒಂದು ಕಡೆ ಕೃಷ್ಣಬೈರೇಗೌಡರು ಕೋಲಾರದ ಬಗ್ಗೆ ಮಾತನಾಡುತ್ತಿದ್ದರೆ, ಇನ್ನೊಂದು ಕಡೆ ರಮೇಶ್ ಕುಮಾರ್ ಜಿಲ್ಲೆಯ ರಾಜಕಾರಣಕ್ಕೆ ಅವರಿಗೆ ಆಹ್ವಾನ ಕೊಟ್ಟಂತೆ ಭಾಸವಾಗುತ್ತಿತ್ತು.








