ಕೃಷ್ಣ ಪರಿಪೂರ್ಣತೆಯ ಸಂಕೇತ..! ಕೃಷ್ಣ ಸದಾ ಕಾಲದಲ್ಲೂ ಪ್ರಚಲಿತ; ಯುಗಯುಗಗಳೇ ಉರುಳಿದರೂ ಪ್ರಸ್ತುತ
ಕೃಷ್ಣನಲ್ಲಿ ಏನಿಲ್ಲ..? ಕೃಷ್ಣನಲ್ಲಿ ಸರ್ವವೂ ಇದೆ. ಅಣು ರೇಣು ತೃಣ ಕಾಷ್ಟ ಎಲ್ಲದರ ಮರ್ಮ ಅರಿತವ ಮಾತ್ರ ಕೃಷ್ಣನಾಗುತ್ತಾನೆ. ಕೃಷ್ಣ ಸರ್ವ ವೇದಜ್ಞ ಸರ್ವ ಮಂತ್ರಜ್ಞ. ಸರ್ವ ತಂತ್ರಜ್ಞ. ಸರ್ವಾಂತರ್ಯಾಮಿ ಅವತಾರಿ.
ಕೃಷ್ಣ ಎಲ್ಲವೂ ಹೌದು! ಅವನಲ್ಲಿ ಬ್ರಹ್ಮಾಂಡದ ಸಮಸ್ತ ಚರಾಚರಗಳ ಚಲನೆಯಿದೆ, ಸ್ಥಿರತೆ ಇದೆ, ಸ್ಥಿತಿಯೂ ಇದೆ ಲಯವೂ ಇದೆ.
ಕೃಷ್ಣ ಯಾಕೆ ಪರಿಪೂರ್ಣ ಗೊತ್ತೇ!
ಅವನಲ್ಲಿ ಬುದ್ದಿವಂತಿಕೆ, ಚಾಣಾಕ್ಷತನ, ಸಮಯ ಪ್ರಜ್ಞೆ, ಅಂತಃಸತ್ವ, ಮೇಧಾವಂತಿಕೆ, ಆರ್ದ್ರ ಹೃದಯ, ತೀಕ್ಷ್ಣ ಪ್ರತಿಕ್ರಿಯೆ, ಆಳವಾದ ಒಳನೋಟ, ದೂರದೃಷ್ಟಿ ಎಲ್ಲವೂ ಇದೆ.
ಕೃಷ್ಣನೊಳಗೊಂದು ಭಾವ ಸಾಗರವಿದೆ ಆದರೂ ಕೃಷ್ಣ ಅದ್ಭುತ ರಾಜಕಾರಣಿ, ಕುಶಾಗ್ರಮತಿ,
ಪ್ರೇಮ, ಸರಸ, ಬಂಧ, ಲಾಲಿತ್ಯ, ಲಾಸ್ಯ, ಕಾವ್ಯ, ದೃಶ್ಯ, ವರ್ಣ, ಕರುಣೆ, ದಯೆ, ಶಾಂತಿ, ನಿರ್ಮಲತ್ವದ ಪ್ರತೀಕ ಕೃಷ್ಣ.
ಕೃಷಣ ನಿರಂಕುಶತ್ವ ಸರ್ವಾಧಿಕಾರಿಯೂ ಹೌದು ಅವನೇ ಕಾಲ, ಅವನೇ ಪ್ರಕೃತಿ, ಅವನೇ ನಿಯತಿ ಅವ ಜಗನ್ನಿಯಾಮಕ.
ಜಗತ್ತಿನಲ್ಲಿ ಘಟಿಸುವ ಎಲ್ಲಾ ಸಂಭವನೀಯ ಘಟನೆಗಳ ಕಾರ್ಯ ಕಾರಣ ಈ ಕೃಷ್ಣ ಕಾಯ.
ಕೃಷ್ಣ ಯಾರು? ಖೈದಿ, ಗೊಲ್ಲ, ತುಂಟ, ರಸಿಕ, ದೇವ, ನರ, ಯಕ್ಷ, ಕಿನ್ನರ, ಕಿಂಪುರುಷ, ಗಂಧರ್ವ, ನಾಗ, ಅಸುರ…?
ದೇವಕಿ ಗರ್ಭ ಸಂಜಾತ, ವಸುದೇವ ಸುತ,
ಯಶೋಧೆ ಮಡಿಲು ತುಂಬಿದ ನಂದ ಕಂದ,
ವ್ರಜದಲ್ಲಿ ಬೆಳೆದ, ಗೋವರ್ಧನ ಎತ್ತಿದ, ಬಾಲ್ಯದಲ್ಲೇ ರಕ್ಕಸರ ವಧಿಸಿದ, ಕಾಳಿಂಗ ಮರ್ಧಿಸಿದ, ವೃಷ್ಟಿಕ ಚಾಣೂರರಿಗೆ ಮೋಕ್ಷ ಕರುಣಿಸಿದ, ಕಂಸ ಮಾವನ ಕೊಂದ, ಜರಾಸಂಧನ ಕೊಲ್ಲಿಸಿದ, ಶಿಶುಪಾಲನ ತಲೆ ಕಡಿದ, ಕಾಲೆಯನ ಮೃತ್ಯುವಿಗೆ ಕಾರಣನಾದ, ರುಕ್ಮಿಣಿಯನ್ನು ಅಪಹರಿಸಿದ, ಮಥುರೆಯಿಂದ ಓಡಿ ಹೋದ, ದ್ವಾಪರ ಬೆಳಗಿದ,
ದ್ವಾರಕೆ ಕಟ್ಟಿದ.
ಕೃಷ್ಣ ಯಾರು?
ಪಲಾಯನಕ್ಕೂ ವ್ಯಾಖ್ಯಾನ ನೀಡಿದವ.
ರಾಧೆಯೊಡಲ ವಿರಹದುರಿಯ ಶಮನ ಮಾಡಿದವ.
ಗೋವಿನ ಸಾನಿಧ್ಯದಲ್ಲಿ ಜನನಿಯ ಕಂಡವ.
ಪೂತನಿಯೆಂಬ ವಿಷಕನ್ಯೆಯ ಮೊಲೆಯಲಿ ಅಮೃತ ಉಂಡವ.
ಮುರುಳಿ ನುಡಿಸಿ ಪ್ರಕೃತಿ ಮಾರ್ಧನಿಸಿದವ.
ಮಣ್ಣು ತಿಂದ ಬಾಯಲ್ಲಿ ಬ್ರಹ್ಮಾಂಡ ಕಾಣಿಸಿದ.
ಅಂಬೆಗಾಲಿಡುವಾಗ ಬೆಣ್ಣೆ ಕದ್ದ; ನಡೆದಾಡಲು ಶುರುಮಾಡಿದಾಗ ಗೋಪಿಕೆಯರ ಸೀರೆ ಕದ್ದ.
ಸಮಸ್ತ ಆರ್ಯಾವರ್ತ – ಬ್ರಹ್ಮಾವರ್ತಗಳ ಜನಗಳ ಮನಸೂ ಕದ್ದ; ರಾಜಕಾರಣ ಮಾಡುತ್ತಾ ಕ್ಷತ್ರಿಯ ರಾಜರ ನಿದ್ದೆ ಕದ್ದ.
ದ್ರೌಪತಿಗೆ ಅಕ್ಷಯ ವಸ್ತ್ರ ಕರುಣಿಸಿದ ; ವನವಾಸದ ಸಮಯದಲ್ಲಿ ಅದೇ ಪಾಂಚಾಲಿಗೆ ಅಕ್ಷಯ ಪಾತ್ರೆ ಕೊಟ್ಟ.
ದೂರ್ವಾಸರಿಂದ ಶಾಪಕ್ಕೆ ತುತ್ತಾದ; ಧರ್ಮಕ್ಕಾಗಿ ಮಾತು ತಪ್ಪಿ ಮೋಸಗಾರನೆನಿಸಿಕೊಂಡ.
ಪಾಂಚಜನ್ಯ ಊದಿ ಸಮರಕ್ಕೆ ನಾಂದಿ ಹಾಡಿದ; ವಿಶ್ವರೂಪ ತೋರಿಸಿ ನಿಮಿತ್ತ ಮಾತ್ರಂ ಭವ ಎಂದ.
ಧರ್ಮರಾಜನ ಬಾಯಲ್ಲಿ ಮಿಥ್ಯೆ ನುಡಿಸಿದ; ಕರ್ಣನ ದಾನ ಪಡೆದು ರಥಚಕ್ರ ಮುರಿಸಿದ
ಗಧಾಯುದ್ಧದಲಿ ದುರ್ಯೋಧನನ ತೊಡೆಮುರಿಸಿದ.
ಯಾದವೀ ಕಲಹ ತಡೆಯಲಾಗದೇ ಜರಾ ಶರದಿಂದ ಅವತಾರ ಮುಗಿಸಿದ.
ಕೃಷ್ಣನಿವನು…!
ಧರ್ಮಕ್ಷೇತ್ರವನ್ನು ಕುರುಕ್ಷೇತ್ರವನ್ನಾಗಿಸಿದವ.
ಅರ್ಜುನನಿಗೆ ನೀತಿ ಹೇಳಿದ ಗೀತಾಚಾರ್ಯ.
ಮಹಾಭಾರತವೆನ್ನುವ ಜಗನ್ನಾಟಕ ರಚಿಸಿದ ನಿರ್ದೇಶಕ.
ಅಂಧಕಾರದ ಸಮಾಜಕ್ಕೆ ಪ್ರಕಾಶ ಧಾರೆ ಎರೆದ ಜಗದ್ಗುರು.
ಮಾಯಾವಿ, ಅಸುರ, ಮೋಸಗಾರ, ತಂತ್ರಗಾರ ಅನ್ನುವ ಕಳಂಕಿತ.
ದೃತರಾಷ್ಟ್ರನ ಮೃತ್ಯು ಅಪ್ಪುಗೆಯಿಂದ ಭೀಮನ ಉಳಿಸಿದ ಚಾಣಾಕ್ಯ.
ಪಾಂಚಜನ್ಯ ಮೊಳಗಿಸಿ ಅಧರ್ಮ ನಿಗ್ರಹಿಸಿದವ.
ಸುದರ್ಶನ, ಕೌಮೇದಿನಿಗಳಿದ್ದರು ನಿಃಶಸ್ತ್ರನಾಗಿ 18 ದಿನದ ಕದನ ನಿರೂಪಿಸಿದವ.
ಗಾಂಧಾರಿಯ ಉಗ್ರ ಶಾಪವನ್ನುಂಡರೂ ನಸು ನಗುತ್ತಲೆ ನಿರ್ಯಾಣ ಹೊಂದಿದವ.
ಕೃಷ್ಣ ಸದಾ ಕಾಲದಲ್ಲೂ ಪ್ರಚಲಿತ; ಯುಗಯುಗಗಳೇ ಉರುಳಿದರೂ ಪ್ರಸ್ತುತ
ಹ್ಯಾಪಿ ಜನ್ಮಾಷ್ಠಮಿ
-(ವಿಭಾ) ವಿಶ್ವಾಸ್ ಭಾರದ್ವಾಜ್