ಬೆಂಗಳೂರು : ಮಹಾಮಾರಿ ಕೊರೊನಾ ವೈರಸ್ ನಿಯಂತ್ರಣಕ್ಕೆ ಕಳೆದ 40ಕ್ಕೂ ಹೆಚ್ಚು ದಿನಗಳಿಂದ ಲಾಕ್ ಡೌನ್ ವಿಧಿಸಲಾಗಿದೆ. ಮೇ.4 ರ ಬಳಿಕವೂ ಕೆಲ ಸಡಿಲಿಕೆಯೊಂದಿಗೆ ದೇಶದಲ್ಲಿ ಲಾಕ್ ಡೌನ್ ಮುಂದುವರೆಯಲಿದೆ. ಏತನ್ಮಧ್ಯೆ, ತಮ್ಮ ಊರುಗಳಿಗೆ ತೆರಳಲು ಸಾಧ್ಯವಾಗದೇ ಸಂಕಷ್ಟದಲ್ಲಿ ಸಿಲುಕಿರುವ ಕಾರ್ಮಿಕರು ಊರಿಗೆ ತೆರಳಲು ಸರ್ಕಾರ ಬಸ್ ವ್ಯವಸ್ಥೆ ಮಾಡಿದೆ. ಆದರೆ, ಕೆಎಸ್.ಆರ್.ಟಿ.ಸಿ ವತಿಯಿಂದಲೇ ಬಡ ಕಾರ್ಮಿಕರಿಂದ ದುಪ್ಪಟ್ಟು ಹಣ ವಸೂಲಿ ಮಾಡಲಾಗುತ್ತಿದೆ.
ಇಂದು ತಮ್ಮ ತಮ್ಮ ಊರುಗಳಿಗೆ ವಾಪಾಸ್ ಹೋಗಲು ಕಾರ್ಮಿಕರು ಏಕಾಏಕಿ ಮುಗಿಬಿದ್ದರು. ಮೆಜೆಸ್ಟಿಕ್ ನಿಂದ ಬಸ್ ಗಳ ವ್ಯವಸ್ಥೆ ಕಲ್ಪಿಸಿದ್ದು, ಕಾರ್ಮಿಕರು ಸಾಮಾಜಿಕ ಅಂತರವಿಲ್ಲದೇ, ಯಾವುದೇ ಮಾಸ್ಕ್ ಧರಿಸದೇ ನಿರ್ಲಕ್ಷ್ಯ ವಹಿಸಿದ್ದು ಕಂಡುಬಂತು. ಆದ್ರೆ ಈಗಾಗಲೇ ಕೆಲಸವಿಲ್ಲದೇ ತತ್ತರಿಸಿರುವ ಬಡ ಕಾರ್ಮಿಕರಿಗೆ ಕೆ.ಎಸ್.ಆರ್.ಟಿ.ಸಿ ಭಾರಿ ಮೊತ್ತದ ಪ್ರಯಾಣ ದರ ವಿಧಿಸುವ ಮೂಲಕ ದೊಡ್ಡ ಶಾಕ್ ನೀಡಿದೆ. ಬಾಗಲಕೋಟೆಗೆ ತೆರಳಲು ಈ ಮೊದಲು 700 ರೂ. ಇತ್ತು. ಈಗ 1311 ರೂ.ವಿಧಿಸಲಾಗಿದೆ. ಇನ್ನು ಬಳ್ಳಾರಿಗೆ ತೆರಳಲು 450 ರೂ. ಇದ್ದ ದರವನ್ನು 884ಕ್ಕೆ ಏರಿಕೆ ಮಾಡಲಾಗಿದೆ. ಅಂತೆಯೇ ಬೆಳಗಾವಿಗೆ ಈ ಮೊದಲು 800 ರೂ. ಇದ್ದ ದರವನ್ನು 1478 ರೂ.ಗೆ ಹೆಚ್ಚಿಸಲಾಗಿದೆ. ಇದು ಬಡಜನರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.