ಕುದುರೆಮುಖದ ಏಳು-ಬೀಳು; ಯುವ ಸಂಶೋಧಕನೊಬ್ಬ ಕಂಡುಹಿಡಿದ ಸಂಪದ್ಭರಿತ ಪ್ರದೇಶ ಈಗ ಗೋಸ್ಟ್‌ ಟೌನ್:

1 min read

ಕುದುರೆಮುಖದ ಏಳು-ಬೀಳು; ಯುವ ಸಂಶೋಧಕನೊಬ್ಬ ಕಂಡುಹಿಡಿದ ಸಂಪದ್ಭರಿತ ಪ್ರದೇಶ ಈಗ ಗೋಸ್ಟ್‌ ಟೌನ್: Saakshatv vishwa vismaya episode4

ಅದೊಂದು ದಿನ ಆ ಯುವ ಸಂಶೋಧಕ ಕರ್ನಾಟಕದ ಪಶ್ಚಿಮ ಘಟ್ಟದಲ್ಲಿರುವ ಎತ್ತರದ ಶಿಖರಗಳನ್ನ ಹಾಗೂ ರಿಡ್ಜ್ ಗಳನ್ನ ಬಳಸಿ ಕುದುರೆ ಸವಾರಿ ಹೊರಟಿದ್ದ. ಆತ ಇದ್ದದ್ದು ಬಹಳಷ್ಟು ಕಾಲದಿಂದ ಮಾನವ ಹೆಜ್ಜೆ ಇಡದ ಕಾಡುಗಳ ಕೊರಕಲುಗಳಲ್ಲಿ. ರಿಡ್ಜ್ ದಾಟಿ ಎತ್ತರೆತ್ತರಕ್ಕೆ ಆತ ಹೊರಟಂತೆ ಆತನ ಕುದುರೆಯು ಅಸಹಜವಾಗಿ ವರ್ತಿಸಲಾರಂಭಿಸಿತು.. ಅದು ಪ್ರತಿ ಹೆಜ್ಜೆ ಇಡುವಾಗಲೂ ಕೊಸರಾಡುತ್ತಿದ್ದುದು ಅವನ ಗಮನಕ್ಕೆ ಬಂತು. ಬರು ಬರುತ್ತಾ ಕುದುರೆ ಒಂದೊಂದು ಹೆಜ್ಜೆಯನ್ನೂ ನಿಧ‌ನಿಧಾನಕ್ಕೆ ಇಡಲಾರಂಭಿಸಿತು‌‌. ಅಲ್ಲಿ ಏನಾಗುತ್ತಿದೆ ಎಂದು ಆತನಿಗೆ ತಿಳಿಯಲಿಲ್ಲವಾದರೂ ಕುದುರೆ ಹೆಜ್ಜೆಯಿಡಲು ಬಹು ಪ್ರಯಾಸ ಪಡುತ್ತಿದೆ ಎಂಬುದಂತೂ ಆತನಿಗೆ ಸ್ಪಷ್ಟವಾಯ್ತು. Saakshatv vishwa vismaya episode4

Saakshatv vishwa vismaya episode4

ಏಕೆ ಹೀಗಾಗ್ತಿದೆ? ಕುದುರೆಗೆ ನಿತ್ರಾಣವಾಗಿದೆಯೆ? ಅಥವಾ ಅದಕ್ಕೆ ಮೇಲೇರಿದಂತೆ ಉಸಿರಾಟಕ್ಕೇನಾದರೂ ತೊಂದರೆ ಉಂಟಾಯ್ತೆ? ಎಂಬ ಹಲವು ಗೊಂದಲಗಳು ಆ ಯುವ ತಜ್ಞನ ತಲೆಯಲ್ಲಿ ಸುಳಿದಾಡತೊಡಗಿದವು. ಮುಂದಿನ ಒಂದು ಎತ್ತರದ ಕಣಿವೆಯನ್ನ ಏರಿದಂತೆ ಆತ ಕುದುರೆಯ ಕಾಲುಗಳ ಕಡೆಗೆ ಗಮನ ಹರಿಸಿದ. ನೆಲವೇನೂ ತೇವ ಅಥವಾ ಇಳಿಜಾರಿನ ಅಂಟಿನಿಂದ ಕೂಡಿರಲಿಲ್ಲ. ಅದು ಸಹಜವಾಗಿಯೇ ಇತ್ತು. ಸೂಕ್ಷ್ಮವಾಗಿ ಅವಲೋಕಿಸಿದಾಗ ಕುದುರೆಯ ಕಾಲ್ಗಳು ನೆಲಕ್ಕೆ ಅಂಟಿಕೊಳ್ತಿದ್ದವು. ಆಯಸ್ಕಾಂತಕ್ಕೆ ಕಬ್ಬಿಣ ಅಂಟಿಕೊಂಡ ಹಾಗೆ. ಯುವ ಸಂಶೋಧಕ ಅವಾಕ್ಕಾದ. ತಕ್ಷಣವೇ ಆತ ಕುದುರೆಯನ್ನ ನಿಲ್ಲಿಸಿ ಆ ನೆಲವನ್ನೊಮ್ಮೆ ದಿಟ್ಟಿಸಿ ನೋಡಿದ.‌ ಕುದುರೆಯ ಕಾಲಲ್ಲಿದ್ದ ಕಬ್ಬಿಣದ ಲಾಳಗಳನ್ನ ಆ ನೆಲ ನಿಗೂಢವಾಗಿ ತನ್ನತ್ತ ಸೆಳೆಯುತ್ತಿತ್ತು.

ಆತನಿಗೆ ಕೂಡಲೇ ಅರಿವಾಗಿ ಹೋಯ್ತು. ತಾನು ನಿಂತಿರುವುದು ಬರೀ ಕಲ್ಲಿನ ನೆಲದ ಮೇಲಲ್ಲ. ಬದಲಿಗೆ ವಿಸ್ತಾರವಾದ ಕಬ್ಬಿಣದ ನಿಕ್ಷೇಪವೊಂದರ ಮೇಲೆ ಎಂದು! ಆತನಿಗೆ ಅಚ್ಚರಿಯಾಯ್ತು. ಇಷ್ಟು ವರ್ಷ ಯಾರ ಕಣ್ಣಿಗು ಬೀಳದೆ ಉಳಿದ ಈ ಕಾಡು ಹಾಗೂ ಅದರ ಈ ಕಗ್ಗಲ್ಲ ಕಣಿವೆಗಳಲ್ಲಿ ಇಂಥ ಆಸ್ತಿಯೊಂದಿದೆ ಎಂದು. ಆ ಯುವ ತಙ್ಞನ ಹೆಸರೇ ಸಂಪತ್ ಐಯ್ಯಂಗಾರ್ ಎಂದು. ಆತ ಆಗಿನ ಮೈಸೂರು ಪ್ರಾಂತ್ಯದ ಮೈಸೂರು ಜಿಯಾಲಜಿಕಲ್ ಇಲಾಖೆಯಿಂದ ಮೈಸೂರು ಸಂಸ್ಥಾನಕ್ಕೊಂದು ಭೌಗೋಳಿಕ ನಕ್ಷೆ ತಯಾರಿಸುವ ಉದ್ದೇಶದಿಂದ ಅಲ್ಲಿ ಕೆಲಸ ನಡೆಸಲು ಬಂದಿದ್ದವ.

ಆದರೆ ಬಹು ಅಚಾನಕ್ ಆಗಿ ಆ ಭೂಗರ್ಭದಲ್ಲಿ ಅಪಾರ ಪ್ರಮಾಣದಲ್ಲಿ ಅಡಗಿದ್ದ ಮ್ಯಾಗ್ನಟೈಟ್ ಕ್ವಾರ್ಟ್‌ಜೈಟ್ ಎಂಬ ಉಕ್ಕಿನ ಖನಿಜದ ನಿಕ್ಷೇಪವನ್ನ ಆತ ಮೊಟ್ಟ ಮೊದಲಿಗೆ ಅಲ್ಲಿ ಸಂಶೋಧಿಸಿದ್ದ ಹಾಗೆ ಆತ ಕಾಲಿಟ್ಟ ಆ ಭೂಗರ್ಭವೇ ಇಂದಿನ ಕುದುರೆಮುಖ. ಕುದುರೆಮುಖದ ಉಕ್ಕು ನಿಕ್ಷೇಪವು ಜಗತ್ತಿಗೆ ಬೆಳಕಿಗೆ ಬಂದದ್ದು ಹೀಗೆ. ಕುದುರೆಮುಖದ ಚರಿತ್ರೆಯಲ್ಲೆ ಈ ಅನಿರೀಕ್ಷಿತ ಸಂಶೋಧನೆ ಒಂದು ಪ್ರಮುಖ ಅಧ್ಯಾಯವೆನ್ನಬಹುದು. ಕುದುರೆಮುಖದಲ್ಲಿ ಕಬ್ಬಿಣ ಹಾಗೂ ಉಕ್ಕಿನ ಗಣಿಗಾರಿಕೆ ಹುಟ್ಟಿದ ಕತೆಯ ಕಿರು ಪರಿಚಯ ಇದು. ಕುದುರೆಮುಖ ಕರ್ನಾಟಕದ ಅಪರೂಪದ ಹಾಗೂ ಅನುಪಮ ಪ್ರೇಕ್ಷಣೀಯ ಸ್ಥಳ ಎಂದು ನಿಮಗೆಲ್ಲ ಗೊತ್ತು. ಕುದುರೆಮುಖ ಇರುವುದು ಕರ್ನಾಟಕದ ಚಿಕ್ಕ ಮಗಳೂರು ಜಿಲ್ಲೆಯಲ್ಲಿ, ಮಲೆನಾಡ ಭಾಗದಲ್ಲಿ. ಇದು ಕಳಸಾದಿಂದ 20 ಕಿಲೋ ಮೀಟರ್ ದೂರದಲ್ಲಿಯೂ. ಮಂಗಳೂರಿನಿಂದ ಸುಮಾರು 100 ಕಿಲೋ ಮೀಟರ್ ಗಳ ದೂರದಲ್ಲು ಇದೆ.

Saakshatv vishwa vismaya episode4

ಕುದುರೆಮುಖ ತನ್ನ ವಿಶಿಷ್ಟ ಶೈಲಿಯ ಗಿರಿ ಶಿಖರ ಹಾಗು ಪರ್ವತ ಸಾಲುಗಳುಳ್ಳ ಸುಂದರ ಜಾಗ. ಇಲ್ಲಿ ಎತ್ತರದ ಅನೇಕಾರು ಶಿಖರ ಶ್ರೇಣಿಗಳಿದ್ದು. ಮುಳ್ಳಯ್ಯನಗಿರಿಯ ನಂತರ ಎರಡನೇ ಅತಿ ಎತ್ತರದ ಶಿಖರ ಶ್ರೇಣಿ ಈ ಕುದುರೆ ಮುಖ. ಇದರ ಒಂದು ಪ್ರಮುಖ ಬೆಟ್ಟದ ತಪ್ಪಲು ಒಂದು ಕೋನದಿಂದ ಕುದುರೆಯ ಮುಖದಂತೆ ಕಾಣುವುದರಿಂದ ‘ಕುದುರೆ ಮುಖ’ ಎಂಬ ಹೆಸರೆ ಈ ಸ್ಥಳಕ್ಕೆ ರೂಢಿಯಾಯ್ತು. ಕರ್ನಾಟಕದ ಎರಡನೇ ಅತಿ ದೊಡ್ಡ ನ್ಯಾಚುರಲ್ ಫಾರೆಸ್ಟ್ ರಿಸರ್ವ್ ಕುದುರೆ ಮುಖದಲ್ಲಿದೆ. ಕುದುರೆಮುಖವು ಬಹು ವಿಸ್ತಾರವಾದ ಸಸ್ಯ ಸಿರಿ ಹಾಗೂ ಹಸಿರು ಮರಗಿಡಗಳನ್ನ ಹೊಂದಿದ ಕರ್ನಾಟಕದ ಪ್ರಮುಖ ನ್ಯಾಚುರಲ್ ವೆಜಿಟೇಷನ್ ಉಳ್ಳ ಸ್ಪಾಟ್.

ಇದು ತನ್ನ ಒಡಲಿನೊಳಗೆ ಅಸಂಖ್ಯಾತ ವನ್ಯ ಜೀವಿ ಸಂಕುಲಗಳಿಗೆ ಆಶ್ರಯವಿತ್ತು ಕಾಪಾಡ್ತಿದೆ. ಇದು ಕರ್ನಾಟಕದ ಹುಲಿ ಸಂರಕ್ಷಣಾ ತಾಣಗಳಲ್ಲಿಯು ಒಂದಾಗಿದೆ. ಇದರ ಹಸಿರಿನ ದಟ್ಟ ಪ್ರಭಾವದಿಂದಾಗಿ ವರ್ಷಾಂತ್ಯಕ್ಕೆ ಕುದುರೆಮುಖದಲ್ಲಿ ಸುಮಾರು 7 ಸಾವಿರ ಮಿಲಿಮೀಟರ್ ನಷ್ಟು ಮಳೆ ಸಂಭವಿಸುತ್ತದೆ. ಕುದುರೆ ಮುಖವನ್ನ ಈಗ ಕರ್ನಾಟಕದ ಅಧಿಕೃತ ಟೈಗರ್ ರಿಸರ್ವ್ ಎಂದು ಪರಿಗಣಿಸಲಾಗಿದೆ. ಡಾ ಕೆ ಉಲ್ಲಾಸ್ ಕಾರಂತ್ ಎಂಬ ಪ್ರಖ್ಯಾತ ಹುಲಿ ತಜ್ಞರು ಹಾಗೂ ಪರಿಸರವಾದಿಯೊಬ್ಬರು 1983-84 ರಲ್ಲಿ ಅಳಿವಿನಂಚಿಗೆ ಬರುವಂತಿದ್ದ ಸಿಂಹ ಬಾಲದ ಒಂದು ಜಾತಿಯ ಮಕಾಕ್ ಕಪಿಗಳನ್ನ ಕುದುರೆಮುಖದಲ್ಲಿದ್ದ ಅವುಗಳಿಗೆ ಅನುಕೂಲವಾಗಬಲ್ಲಂಥ ವಾತಾವಾರಣದಲ್ಲಿ ಇರಿಸಿ ವರ್ಗೀಕರಿಸಿ ಅವುಗಳ ಸವಿವರ ಅಧ್ಯಯನ ಕೈಗೊಳ್ಳಲು ಬಂದಿದ್ದಾಗ ಇಲ್ಲಿ ಹೇರಳವಾಗಿದ್ದ ಹುಲಿಗಳ ಸಮೂಹಕ್ಕೆ ಸಾಕ್ಷಿಯಾಗ್ತಾರೆ.

Saakshatv vishwa vismaya episode4

ದೇಶದ ಬೇರೆಡೆ ಅತ್ಯಲ್ಪವಾಗ್ತಿರುವ ಕಪಿ ಜಾತಿಗಳನ್ನ ಕುದುರೆ ಮುಖದ ವೆಜಿಟೇಷನ್ ನಲ್ಲಿ ಸಾಕಿ ಅವುಗಳ ಸಂಖ್ಯೆಯನ್ನ ಇಲ್ಲಿ ದ್ವಿಗುಣಗೊಳಿಸಬಹುದೆಂದು ಅವರು ಅಂದಾಜಿಸಿದರು. ಅವರ ಒತ್ತಾಯದಂತೆ ಅವರ ಕಾಲದಲ್ಲೆ ಕುದುರೆಮುಖವನ್ನ ಒಂದು ಸಕ್ರಿಯ ನ್ಯಾಷನಲ್ ಪಾರ್ಕ್ ಆಗಿ ರಾಜ್ಯ ಸರ್ಕಾರದಿಂದಲೆ ಘೋಷಿಸಲಾಯ್ತು. ಇದರ ರಾಷ್ಟ್ರೀಯ ವನವು ಪಶ್ಚಿಮ‌ ಘಟ್ಟಗಳ ಕೋಸ್ಟಲ್ ಬಯಲುಗಳನ್ನ ಬಳಸಿ ಚಿಕ್ ಮಗಳೂರ್, ಉಡುಪಿ ಹಾಗೂ ದಕ್ಷಿಣ ಕನ್ನಡ ಈ ಮೂರೂ ಜಿಲ್ಲೆಗಳನ್ನೂ ಸಹ ಸುತ್ತುವರಿದ ರಾಜ್ಯದ ಪ್ರಮುಖ ಅರಣ್ಯ ರಿಸರ್ವ್ ಆಗಿದೆ.

ಇಲ್ಲಿ ತುಂಗಾ, ಭದ್ರಾ ಹಾಗೂ ನೇತ್ರಾವತಿ ಎಂಬ ಮೂರು ಪ್ರಮುಖ ನದಿಗಳು ಹರಿಯುತ್ತವೆ.. ಕುದುರೆ ಮುಖದ ಅತಿ ಎತ್ತರದ ಪೀಕ್ ಒಂದು ಸುಮಾರು 1900 ಮೀಟರ್ ಗಳಷ್ಟು ಎತ್ತರದಲ್ಲಿದೆ. ರಾಜ್ಯದಲ್ಲಿ ಭದ್ರಾವತಿಯ ಸ್ಟೀಲ್ ಪ್ಲಾಂಟ್ 1923 ರಲ್ಲಿ ಸರ್ ಎಂ ವಿಶ್ವೇಶ್ವರಯ್ಯರವರಿಂದ ಸ್ಥಾಪನೆಯಾದರೂ ಸಹ ಕುದುರೆಮುಖದಲ್ಲಿ ಉಕ್ಕಿನ ನಿಕ್ಷೇಪವು ಅದಕ್ಕು ಮುನ್ನವೇ ಪತ್ತೆಯಾಗಿತ್ತು.
ಕುದುರೆಮುಖವು ಹುಲಿ, ಚಿರತೆ, ಕಾಡು ನಾಯಿಗಳು, ಕಾಡು ಹಂದಿ, ಬೊನ್ನೆಟ್ ಮಕಾಕ್ ಕಪಿ, ಲಂಗೂರ್, ಸಿಂಹ ಬಾಲದ ಮಕಾಕ್ ಮುಂತಾದ ಹತ್ತು ಹಲವು ವಿಶಿಷ್ಟ ಬಗೆಯ ವನ್ಯ ಮೃಗಗಳ ಆವಾಸಸ್ಥಾನವಾಗಿದೆ.

1968 ರಲ್ಲಿ ಅನೇಕ ವಿದೇಶೀ ಕಂಪನಿಗಳ ಸಲಹೆ ಹಾಗೂ ಒತ್ತಾಯದ ಮೇರೆಗೆ ಅಲ್ಲಿ ಐರನ್ ಓರ್ ಮೈನಿಂಗ್ ಬಗ್ಗೆ ಚಿಂತಿಸಲಾಯ್ತು. 37 % ಪ್ರತಿಶತದಷ್ಟು ಉಕ್ಕಿನಂಶ ಇರುವ ಒಂದು ಅದಿರಿನಿಂದ 68% ಪ್ರತಿಶತದ ಪ್ರಮಾಣದಷ್ಟು ಕಬ್ಬಿಣವನ್ನ ಸ್ಟೀಲ್ ನಲ್ಲಿ ತುಂಬಿ ತಯಾರಿಸಬಹುದೆಂದು ಎಕ್ಸ್ ಪರ್ಟ್ ಅಭಿಪ್ರಾಯ ಪಟ್ಟರು. ಇಲ್ಲಿ kiocl ಸಂಸ್ಥೆ ಶುರುವಾಗಲು ಮುಖ್ಯ ಕಾರಣರೇ ಸಂಪತ್ ಐಯ್ಯಂಗಾರ್ ರವರು ಎನ್ನಬಹುದು. ಸಂಪತ್ ಐಯ್ಯಂಗಾರ್ ರವರು ತಮ್ಮ ಕೆಲಸವನ್ನ ಅಲ್ಲಿ ಮಾಡಿ ಮುಗಿಸಿದ ಬಳಿಕ ಕುದುರೆಮುಖದ ಉಕ್ಕಿನ ಸಂಶೋಧನೆ ನಡೆಸಿದ ಹರಿಕಾರ ಎನಿಸಿಕೊಂಡರು. ಅವರು ನಕ್ಷೆ ತಯಾರಿಸಿದ ಬಳಿಕ ಅಲ್ಲಿ ಇರಬಹುದಾದ ಇತರೆ ಮಿನರಲ್ ರಿಸೋರ್ಸ್ ನ ಮೂಲವನ್ನ ಪತ್ತೆ ಹಚ್ಚಲು ಮುಂದಾದರು.

ಉಕ್ಕು, ಅದಿರು ಮುಂತಾದ ಪ್ರಮುಖ ಖನಿಜ ಸಂಪನ್ಮೂಲಗಳ ನಿಧಿಯನ್ನ ಐಯ್ಯಂಗಾರ್ ಶೋಧಿಸಿದರು. ಕ್ರಮೇಣ ಅವರು ಬ್ರಿಟೀಷ್ ಕಾಲದ ಮೈಸೂರು ವಿವಿಯ ಮೊಟ್ಟ ಮೊದಲ ಭಾರತೀಯ ಡೈರೆಕ್ಟರ್ ಆಫ್ ಡಿಪಾರ್ಟ್ ಮೆಂಟ್ ಹಾಗೂ ಅಲ್ಲಿನ ಜಿಯಾಲಜಿ ವಿಭಾಗದ ಮುಖ್ಯಸ್ಥರಾಗಿಯೂ ಸಹ ಬಡ್ತಿ ಪಡೆದರು.
ಅವರ ನಂತರ ಬಂದ ಬಿ ರಾಮ ರಾವ್, ಬಿ ಪಿ ರಾಧಾಕೃಷ್ಣ ಹಾಗೂ ಪಿಚ್ಚಮುತ್ತು ಮುಂತಾದ ಉತ್ತರಾಧಿಕಾರಿಗಳು ಸಹ ಮುಂದೆ ಅಲ್ಲಿನ‌ ನಿಕ್ಷೇಪಗಳಿದ್ದುದರ ಬಗ್ಗೆ ಸಾಬೀತು ಪಡಿಸಿದರು. 1913 ರಲ್ಲಿ ಶುರುವಾದ ಈ ತನಿಖೆ ಕಾರ್ಯಗತಕ್ಕೆ ಬರಲು ಬಹಳ ಕಾಲ ಹಿಡಿಯಿತು. 1969 ರ ಸುಮಾರಿಗೆ ಅಲ್ಲಿನ ಅಧಿಕಾರಿಗಳು ಇಲ್ಲಿನ‌ ನಿಕ್ಷೇಪಗಳಲ್ಲಿ ಗಣಿಗಾರಿಕೆಯ ಕಾರ್ಯ ಆರಂಭವಾಗಬೇಕೆಂದು ಸರ್ಕಾರಕ್ಕೆ ಒತ್ತಾಯಿಸಿದರು.

1969 ರಲ್ಲಿ ಮೊದಲ ಬಾರಿಗೆ ಅಲ್ಲಿ ಕುದುರೆಮುಖ್ ಐರನ್ ಓರ್ ಕಾರ್ಪೊರೇಷನ್ ಲಿಮಿಟೆಡ್ (KIOCL) ಎಂಬ ಸಂಸ್ಥೆ ಶುರುವಾಯ್ತು. ಕೆನೆಡಾ ಮೂಲದ ಮೆಟ್-ಚಾಮ್ ಎಂಬ ವಿದೇಶೀ ಸಂಸ್ಥೆಯೊಂದರ ಸಹಭಾಗಿತ್ವದೊಂದಿಗೆ ಪ್ರಕೃತಿಯ ಒಡಲಿಗೆ ಹಾನಿ ಮಾಡದೆ ಅಲ್ಲಿ ಕಾರ್ಯ ಚಟುವಟಿಕೆಗಳು ಪ್ರಾರಂಭಗೊಂಡವು. 1968 ರಲ್ಲೆ ಇಲ್ಲಿನ ನಿಕ್ಷೇಪದ ಕಡೆಗೆ ಆಸಕ್ತರಾದ ಹಲವು ಜಪಾನೀ ಕಂಪನಿಗಳು ಅಲ್ಲಿ ಗಣಿಗಾರಿಕೆ ನಡೆಸಲು ಮುಂದೆ ಬಂದಿದ್ದವು. ಆಗ ಭಾರತೀಯ ಸರ್ಕಾರೀ ಒಡೆತನದಲ್ಲಿದ್ದ ನ್ಯಾಷನಲ್ ಮಿನರಲ್ ಡೆವಲಪ್‌ಮೆಂಟ್ ಕಾರ್ಪೊರೇಶನ್ (NMDC) ನ ಅಡಿಯಲ್ಲಿ ಈ ಗಣಿಗಾರಿಕೆ ನಡೆಯಬೇಕೆಂಬ ಮಾತಾಗಿತ್ತು.

ಮೊದ ಮೊದಲು ಕೇವಲ ನೂರು ಮೀಟರ್ ಆಳ ತೋಡಿ ಓರ್ ನ ನಿಕ್ಷೇಪ ಯಥೇಚ್ಛವಾಗಿದ್ದುದರಿಂದ ಸಾಕಷ್ಟು ಮಟ್ಟದ ಅದಿರನ್ನ ಅಲ್ಲಿಂದ ಹೊರತೆಗೆಯಬಹುದಿತ್ತು. ಅಲ್ಲಿನ ಈಶಾನ್ಯ ದಿಕ್ಕಿನ ಕೆಲ ಗಿರಿ ತಪ್ಪಲುಗಳ ರಿಡ್ಜ್ ಗಳಲ್ಲಿ ಎರಡು ಮೈಲುಗಳ ಉದ್ದದವರೆಗು ಈ ನಿಕ್ಷೇಪವು ತನ್ನ ಸ್ಥಳ ಆಕ್ರಮಿಸಿಕೊಂಡಿತ್ತು. ಅಲ್ಲಿ ಸಿಗುತ್ತಿದ್ದ ಕಚ್ಚಾ ಅದಿರು ಮ್ಯಾಗ್ನಟೈಟ್ ಕ್ವಾರ್ಟ್‌ಜೈಟ್ ಎಂಬ ಖನಿಜದ ಕಾಂಪೊಸಿಟ್ ಭಾಗವಾಗಿತ್ತು. ಅದನ್ನ ಹೊರತೆಗೆದು ಅದರಿಂದ ಮ್ಯಾಗ್ನಟೈಟ್, ಸಿಲಿಕಾ ಹಾಗೂ ಕ್ಲೇ ಖನಿಜಗಳನ್ನ ಪ್ರತ್ಯೇಕಿಸಲಾಗ್ತಿತ್ತು.

Saakshatv vishwa vismaya episode4

ಹತ್ತಿರದಲ್ಲಿ ಒಂದು ಸರಳ ಮಿಲ್ ಸ್ಥಾಪಿಸಿ ಅದಿರನ್ನ ಅಲ್ಲಿಯೇ ಒಡೆಯಲಾಗ್ತಿತ್ತು. ಇಲ್ಲಿ ದೊರೆಯುತ್ತಿದ್ದ ಅದಿರು ಬಹಳ ತೆಳುವಾಗಿದ್ದು ಮ್ಯಾಗ್ನಟಿಕ್ ಸೆಪರೇಟರ್ ನಿಂದ ಅದರಲ್ಲಿನ‌ ಮ್ಯಾಗ್ನಟೈಟ್ ಅನ್ನು ಬೇರ್ಪಡಿಸಲಾಗ್ತಿತ್ತು. ಗಣಿಯ ಮುಖ್ಯ ಕಾರಸ್ಥಾನವು ಶಿಖರಗಳ ಮೇಲೆಯೇ ಇದ್ದು ಕೆಳಗಿನ ಅರಣ್ಯಕ್ಕೆ ಯಾವ ಹಾನಿಯನ್ನೂ ಮಾಡದೆ ಅಲ್ಲಿ ಕೆಲಸಗಳು ನಡೆಯುವ ಬಗ್ಗೆ ಯೋಜನೆ ಮಾಡಲಾಗಿತ್ತು. ಅದಿರನ್ನ ಒಯ್ಯಲು ಅಲ್ಲಿ ಬೃಹತ್ ದಾರಿಗಳನ್ನಷ್ಟೆ ನಿರ್ಮಿಸಲಾಯ್ತು.
ಮಂಗಳೂರಿನ ಬಂದರು ಅಲ್ಲಿಂದ ನೂರು ಕಿಲೋ ಮೀಟರ್ ದೂರ ಇದ್ದುದರಿಂದ ಕಚ್ಚಾ ಅದಿರು ಹಾಗೂ ಸಂಸ್ಕರಿಸಲ್ಪಟ್ಟ ಅದಿರನ್ನ ಅಲ್ಲಿಗೆ ಸಾಗಿಸಿ ಅಲ್ಲಿನ ಬಂದರಿನಿಂದ ದೂರದ ಇರಾನ್ ಹಾಗೂ ಇತರೆ ಸೌದಿ ದೇಶಗಳಿಗೆ ರವಾನೆ ಮಾಡುವುದೆಂಬ ಬಗ್ಗೆ ಒಪ್ಪಿತವಾಯ್ತು. ಇಲ್ಲಿನ ಅದಿರನ್ನ ಖರೀದಿಸಲು ಮೊದಲು ಮುಂದೆ ಬಂದ ದೇಶ ಇರಾನ್. ಇದಕ್ಕೆ ಪ್ರತಿಯಾಗಿ ಅವರು ಬ್ಯಾರೆಲ್ ಗಳಷ್ಟು ಆಯಿಲ್ ಕಳಿಸುತ್ತಿದ್ದರು. ಮೈನಿಂಗ್ ನ ಕೆಲಸಗಳಿಗೆ ನೀರೂ ಸಹ ಸಾಕಷ್ಟು ಪ್ರಮಾಣದಲ್ಲಿ ಬೇಕಿದ್ದುದರಿಂದ ನೀರಿನ ಕೊರತೆಯೇ ಇಲ್ಲದಿದ್ದ ಅಲ್ಲಿಯೇ ಒಂದು ಡ್ಯಾಮ್ ಕಟ್ಟಲು‌ ಮುಂದಾದರು. ಆ ಅಣೆಕಟ್ಟಿನ ಹೆಸರೆ ಲಕ್ಯಾ ಡ್ಯಾಮ್. ಅಲ್ಲಿಗೆ ಪೈಪ್ ಲೈನ್ ಮೂಲಕ ಗ್ರಾವಿಟಿ ಶಕ್ತಿಯನ್ನ ಬಳಸಿ ನೀರನ್ನ ಮೇಲೆತ್ತಿ ಸಂಗ್ರಹಿಸಲಾಗ್ತಿತ್ತು. ಅದಿರನ್ನ ಸಂಶ್ಲೇಷಿಸಿದ ಬಳಿಕ ಉಳಿಯುತ್ತಿದ್ದ ಕಚ್ಚಾ ಅದಿರು ಹಾಗು ಕ್ಲೇಯನ್ನು ಕಂಟೈನರ್ ಗಳ ಮೂಲಕ ಸಾಗಿಸಿ ಅದನ್ನ ಪ್ರತ್ಯೇಕವಾಗಿ ಸಂಗ್ರಹ ಮಾಡ್ತಿದ್ದರು.
ಅತ್ಯಂತ ವ್ಯವಸ್ಥಿತವಾಗಿ ಹಾಗೂ ಅಷ್ಟೇ ಆಸಕ್ತಿಕರವಾಗಿ ಅದಿರಿನ ಮೈನಿಂಗ್ ಕೆಲಸ ಕುದುರೆಮುಖದಲ್ಲಿ ನಡೆಯುತ್ತಿತ್ತು. 1976 ರಲ್ಲಿ KIOCL – Kuduremukh Iron Ore mining Corporation Limited ಈಗ ಅಧಿಕೃತವಾಗಿ ರಾಜ್ಯದ ಸ್ಟೀಲ್ ಹಾಗೂ ಮೈನಿಂಗ್ ಮಿನಿಸ್ಟ್ರಿಯ ಅಡಿಯಲ್ಲಿ ಕೆಲಸ ಮುಂದುವರಿಸಿತು.

76 ರಿಂದ ಮುಂದಿನ ಸುಮಾರು 30 ವರ್ಷಗಳವರೆಗು ಅಂದರೆ 2005 ರವರೆಗು ಮೈನಿಂಗ್ ಯಾವ ತಡೆಯಿಲ್ಲದೆ ಸಾಗಿತು. ಆದರೆ ಆ ಹೊತ್ತಿಗೆ ಹೆಚ್ಚಾದ NGO ಗಳ ಉಪಟಳದಿಂದಾಗಿ ಮೈನಿಂಗ್ ನ‌ ಕೆಲಸಕ್ಕೆ ಪ್ರಬಲ ವಿರೋಧ ಎದುರಾಯ್ತು. ಗ್ರೀನ್ ಪೀಸ್, ಫೋರ್ಡ್ ಫೌಂಡೇಶನ್‌ ಎಂಬ ಮುಂತಾದ ವಿದೇಶೀ ಎನ್ವಿರಾನ್ ಮೆಂಟ್ ಫ್ರೆಂಡ್ಲಿ ಏಜೆನ್ಸಿಗಳ ಹಣ ಬೆಂಬಲದಿಂದ ಹುಟ್ಟಿಕೊಂಡ ಈ NGO ಗಳು ಪರಿಸರವಾದಿಗಳಂತೆ ಸೋಗು ಹಾಕ್ತಾ ಮೈನಿಂಗ್ ನಿಂದಾಗಿ ಅಲ್ಲಿನ ಸಮೃದ್ಧತೆ, ಕಾಡಿನ ಸೊಬಗು ಹಾಗು ಅಲ್ಲಿನ ಜೀವಜಾಲಕ್ಕೆ ಕುತ್ತಿದೆ ಎಂದು ಬಡಬಡಾಯಿಸ್ತಾ ಸರ್ಕಾರಕ್ಕೆ ಮೈನಿಂಗ್ ನಿಲ್ಲಿಸುವಂತೆ ಒತ್ತಾಯ ತರಲಾರಂಭಿಸಿದವು. ಈ ಪ್ರಯತ್ನಗಳು ತೊಂಭತ್ತರ ದಶಕದ ಮಧ್ಯ ಭಾಗದಿಂದಲೆ ಶುರುವಾಗಿದ್ದವು. ಸರ್ಕಾರ ಅವುಗಳ ಬಗ್ಗೆ ನಿರ್ಲಕ್ಷ ತೋರಿ ಮೈನಿಂಗ್ ಗೆ ಪ್ರೋತ್ಸಾಹಿಸಿದರೂ ಸಹ ಅಪೊಸಿಷನ್ ನವರು ಈ NGO ಗಳ ಜತೆ ಸೇರಿ ಬೇಡದ ಪ್ರತಿಭಟನೆ ಶುರು ಮಾಡಲು ಆರಂಭಿಸಿದರು.

ಈ NGO ಗಳು ದೇಶ ಉದ್ಧಾರ ಮಾಡುವ, ದೇಶದ ಪ್ರಗತಿಯ ಮುಖವಾಡ ಹೊತ್ತು ಬೇರೆಯದೇ ಹಿಡನ್ ಅಜೆಂಡಾಗಳಿಂದ ಹಾಗು ಪಟ್ಟಭದ್ರ ಹಿತಾಸಕ್ತಿಗಳ ಹಿಂಬೆಂಬಲದಿಂದ ಕುಣಿದಾಡುತ್ತಿದ್ದವು.
ಇಲ್ಲಿನ ಒಳಜಗಳ, ಸರ್ಕಾರಗಳ ವಿಮುಖ ಧೋರಣೆ ಹಾಗು ಘರ್ಷಣೆ ಕಂಡು ಕೆನೆಡಾ ಮೂಲದ ಚಾಮ್ ಸಂಸ್ಥೆ ಇದರಲ್ಲಿ ಹಣ ಹೂಡಲು ನಿರಾಕರಿಸಿತು. ಮೈನಿಂಗ್ ಕಾರ್ಯ ಇಳಿಮುಖವಾದಂತೆ ಅತ್ತ ಇರಾನ್ ಸಹ ಅದಿರನ್ನ ಖರೀದಿಸುವುದನ್ನೆ ನಿಲ್ಲಿಸಿತು.
ಒತ್ತಡ ಯಾವ ಮಟ್ಟಿಗಿತ್ತು ಎಂದರೆ 2006 ರಲ್ಲಿ ಮೈನಿಂಗ್ ಬ್ಯಾನ್ ಆಗಬೇಕೆಂದು ಸುಪ್ರೀಮ್ ಕೋರ್ಟ್ ನಿಂದಲೇ ಬಲವಾದ ಆದೇಶ ಹೊರಬಿತ್ತು. ಇವೆಲ್ಲ ಪ್ರತಿಕೂಲಗಳ ನಡುವೆ ದೇಶದಲ್ಲಿ ಹೆಸರು ಮಾಡಬೇಕಿದ್ದ kiocl ಅಂತಿಮವಾಗಿ ತನ್ನ ಕಾರ್ಯ ಚಟುವಟಿಕೆಯನ್ನ ನಿಲ್ಲಿಸಬೇಕಾಯ್ತು. ಕುದುರೆಮುಖದಿಂದ ಈ ಮೂವತ್ತು ವರ್ಷಗಳಲ್ಲಿ ಅಲ್ಲಿನ ನಿಕ್ಷೇಪದ ಸುಮಾರು ಶೇ 50% ರಷ್ಟು ಅದಿರನ್ನ ಎಕ್ಸ್ ಟ್ರಾಕ್ಟ್ ಮಾಡಲಾಗಿತ್ತು. ಇನ್ನೂ ಮುಂದಿನ 30 – 40 ವರ್ಷಗಳವರೆಗು ಮೈನಿಂಗ್ ಮುಂದುವರಿಸಬಹುದಿತ್ತು.

ಈ ಮೈನಿಂಗ್ ಅಲ್ಲಿನ ಸುಮಾರು 5 ಸಾವಿರ ಶ್ರಮಿಕರಿಗೆ ಉದ್ಯೋಗ ಕೊಟ್ಟಿತ್ತು.. ಇದರಲ್ಲಿ ಹಲವಾರು ವಿದೇಶೀ ಇಂಜಿನಿಯರ್ ಗಳು, ಹಾಗೂ ತಂತ್ರಙ್ಞರೂ ಸಹ ಇದ್ದರು. ಅಲ್ಲಿ ಜನ ಸಂದಣಿ ಹೆಚ್ಚಾದಂತೆ ಅಲ್ಲಿ ಕೆಲಸ ಮಾಡುವವರು ವಂಶಾವಳಿ ಬೆಳೆಯಿತು.‌ ಸುಂದರವಾದ ತೋಟಗಳನ್ನ, ಶಾಲೆಯನ್ನ, ಲೈಬ್ರರಿ ಹಾಗೂ ಭವ್ಯ ಆಡಿಟೋರಿಯಂ ಒಂದನ್ನೂ ಸಹ ಅಲ್ಲಿ ಆರಂಭಿಸಲಾಗಿತ್ತು. ಮೈನಿಂಗ್ ನಿಂತ ಮೇಲೆ ಅದನ್ನೇ ನಂಬಿಕೊಂಡಿದ್ದವರು ಜಾಗ ತೊರೆದು ಹೋದರು.‌ ಅಲ್ಲಿನ ಶಾಲೆ, ತೋಟ ಇತ್ಯಾದಿಗಳು ಜನರಿಲ್ಲದೆ ಖಾಲಿಯಾಗುಳಿದವು. ರಾಜ್ಯ ಮಾತ್ರವಲ್ಲದೆ ಇಡೀ ದೇಶದ ಅತ್ಯುತ್ತಮ ಇಂಡಸ್ಟ್ರಿಯಲ್ ಸಿಟಿಯಾಗಿ ಹೊರಹೊಮ್ಮ ಬೇಕಿದ್ದ ಕುದುರೆಮುಖ ಇಂದು ಸ್ವಾರ್ಥ ಶಕ್ತಿಗಳ ಕುತಂತ್ರದ ಫಲವಾಗಿ ನಿಸ್ತೇಜಗೊಂಡಿದೆ. ಇಂದು ಇದನ್ನ ಘೋಸ್ಟ್ ಟೌನ್ ಎನ್ನುತ್ತಾರೆ. ಇದೇ ರೀತಿ ಅಮೇರಿಕಾ ಯೂರೋಪಿನಾದ್ಯಂತ ಕಾರಣಾಂತರಗಳಿಂದ ಮೈನಿಂಗ್ ಕೆಲಸ ನಿಲ್ಲಿಸಲಾದ ಊರುಗಳನ್ನ ಘೋಸ್ಟ್ ಟೌನುಗಳೆಂದು ಕರೆವ ರೂಢಿಯಿತ್ತು.. ಆ ಸಾಲಿಗೆ ರಾಜ್ಯದ ಹೆಮ್ಮೆಯ ಕುದುರೆ ಮುಖ ಸಹ ಸೇರ್ಪಡೆಯಾದುದು ವಿಪರ್ಯಾಸ.

– ಸಂಗ್ರಹ ಲೇಖನ
ಇಂದೂಧರ್‌ ಒಡೆಯರ್‌ ಚಿತ್ರದುರ್ಗ (ಡುಗ್ಗು)
ಹವ್ಯಾಸಿ ಬರಹಗಾರ

 

ಸಾಕ್ಷಾ ಟಿವಿಯ ವಿಶ್ವ ವಿಸ್ಮಯ ಅಂಕಣಕಾರ ಇಂದೂದರ್ ಒಡೆಯರ್ ಚಿತ್ರದುರ್ಗ ಅವರ ಕಿರು ಪರಿಚಯ

 

Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd