ಕಳೆದ ಮೂರು ದಿನಗಳಿಂದ ಕೊರೊನಾ ಪಾಸಿಟಿವ್ ಕೇಸ್‍ಗಳು ಬೆಳಗಾವಿ ಜಿಲ್ಲೆಯಲ್ಲಿ ಪತ್ತೆಯಾಗಿಲ್ಲ. ಅಲ್ಲದೇ ಗ್ರೀನ್ ಜೋನ್ ಇರುವ ಜಿಲ್ಲೆಗಳಲ್ಲಿ ರಾಜ್ಯ ಸರ್ಕಾರ ಲಾಕ್‍ಡೌನ್‍ನಲ್ಲಿ ಕೆಲ ಸಡಿಲಿಕೆ ಮಾಡಿದ್ದನ್ನೆ ನೆಪ ಮಾಡಿಕೊಂಡ ಕುಂದಾನಗರಿ ಜನ ರಸ್ತೆಯಲ್ಲಿ ತಮ್ಮ ವಾಹನಗಳಲ್ಲಿ ಬೇಕಾಬಿಟ್ಟಿ ಓಡಾಡುತ್ತಿರುವ ದೃಶ್ಯ ಕಂಡು ಬಂದಿದೆ.
ಹೌದು ಬೆಳಗಾವಿ ಜಿಲ್ಲೆ ಮೊದಲೇ ಮಹಾಮಾರಿ ಕೊರೊನಾ ಹಾಟ್‍ಸ್ಪಾಟ್ ಪ್ರದೇಶ. ರೆಡ್‍ಜೋನ್ ಪ್ರದೇಶವಾಗಿದೆ. ಅಷ್ಟೇ ಅಲ್ಲದೇ ನಗರದ ಕ್ಯಾಂಪ್ ಪ್ರದೇಶ, ಆಝಾದ್ ಗಲ್ಲಿ ಸೇರಿದಂತೆ ಇನ್ನು ಹಲವೆಡೆ ಕೊರೊನಾ ಸೋಂಕು ಪತ್ತೆಯಾಗಿದ್ದರಿಂದ ಈ ಪ್ರದೇಶಗಳನ್ನು ಕಂಟೇನ್ಮೆಂಟ್ ಪ್ರದೇಶ ಎಂದು ಗುರುತಿಸಲಾಗಿದೆ. ಆದ್ರೆ ಕಳೆದ ಮೂರು ದಿನಗಳಿಂದ ಬೆಳಗಾವಿ ಜಿಲ್ಲೆಯಲ್ಲಿ ಕೊರೊನಾ ಪಾಸಿಟಿವ್ ಕೇಸ್‍ಗಳು ಕಂಡು ಬಂದಿಲ್ಲ. ಅಷ್ಟೇ ಅಲ್ಲದೇ ನಿನ್ನೆಯಷ್ಟೇ ರಾಜ್ಯ ಸರ್ಕಾರ ಗ್ರೀನ್‍ಜೋನ್‍ನಲ್ಲಿರುವ ರಾಜ್ಯದ 11 ಜಿಲ್ಲೆಗಳಲ್ಲಿ ಲಾಕ್‍ಡೌನ್ ಸಡಿಲಿಕೆ ಮಾಡಿ ಆದೇಶ ಹೊರಡಿಸಿದೆ.
ಇದರಿಂದ ಕುಂದಾನಗರಿ ಜನ ನಮಗೂ ಲಾಕ್‍ಡೌನ್ ಸಡಿಲಿಕೆ ಆಗಿದೆ ಎಂದು ತಿಳಿದುಕೊಂಡ ಜನರು ಬೇಕಾಬಿಟ್ಟಿ ಓಡಾಡುತ್ತಿರುವ ದೃಶ್ಯ ಕಂಡು ಬಂದಿದೆ. ನಗರದ ಹೃದಯ ಭಾಗ ಚನ್ನಮ್ಮ ಸರ್ಕಲ್‍ಗೆ ಬರುವ ಎಲ್ಲಾ ರಸ್ತೆಗಳನ್ನು ಪೊಲೀಸರು ಬಂದ್ ಮಾಡಿದ್ದಾರೆ. ಹೀಗಾಗಿ ಆರ್‍ಟಿಓ ಸರ್ಕಲ್, ಕೊಲ್ಹಾಪುರ ಸರ್ಕಲ್, ಲಕ್ಷ್ಮೀ ಕಾಂಪ್ಲೇಕ್ಸ್ ರಸ್ತೆಗಳಲ್ಲಿ ಜನರ ಓಡಾಟ ಜೋರಾಗಿತ್ತು. ಈ ವೇಳೆ ಸ್ಥಳಕ್ಕೆ ಆಗಮಿಸಿದ ಎಸಿಪಿ ನಾರಾಯಣ ಭರಮನಿ, ಎಸಿಪಿ ಚಂದ್ರಪ್ಪ ಜನರ ಸಂಚಾರಕ್ಕೆ ಬ್ರೇಕ್ ಹಾಕಲು ಪ್ರಯತ್ನಿಸಿದರು.
ಬಳಿಕ ಯಾವುದೇ ವಾಹನಗಳು ಸಂಚಾರ ಮಾಡುವಂತಿಲ್ಲ ಎಂದು ಕಟ್ಟುನಿಟ್ಟಿನ ಸೂಚನೆ ನೀಡುವ ಮೂಲಕ ಎಲ್ಲಾ ಜನರನ್ನು ಪೊಲೀಸರು ಮನೆಗೆ ಕಳಿಸಿದರು. ಒಟ್ಟಾರೆ ಬೆಳಗಾವಿ ಸಧ್ಯ ಕೊರೊನಾ ಸೋಂಕಿತರ ಪಟ್ಟಿಯಲ್ಲಿ ರಾಜ್ಯದಲ್ಲಿ ಮೂರನೇ ಸ್ಥಾನ ಹೊಂದಿದೆ. ಅಷ್ಟೇ ಅಲ್ಲದೇ ಈವರೆಗೆ 1463ರ ಜನರ ಗಂಟಲು ದ್ರವದ ಮಾದರಿ ವರದಿ ಬರಬೇಕಿದೆ. ಅದರಲ್ಲಿ ಇನ್ನು ಅದೆಷ್ಟು ಪಾಸಿಟಿವ್ ದೃಢ ಆಗುತ್ತಾವೊ ಗೊತ್ತಿಲ್ಲ. ಆದ್ರೆ ಇಷ್ಟೇಲ್ಲಾ ಕೊರೊನಾ ಗಂಭೀರತೆಯಿದ್ದರೂ ಕೂಡ ಜನ ಸರಿಯಾಗಿ ಅರ್ಥ ಮಾಡಿಕೊಳ್ಳದೇ ಇರುವುದು ಸಧ್ಯ ಜಿಲ್ಲಾಡಳಿತಕ್ಕೆ ದೊಡ್ಡ ತಲೆ ನೋವಾಗಿ ಪರಿಣಮಿಸಿದೆ.