ಹೊಸದಿಲ್ಲಿ, ಜೂನ್ 2 : ನಿರ್ಮಲಾ ಸೀತಾರಾಮನ್ ಅವರ ಬದಲು ಹಣಕಾಸು ಸಚಿವರನ್ನಾಗಿ ಕೆ.ವಿ.ಕಾಮತ್ ರವರನ್ನು ನೇಮಿಸಲಾಗುತ್ತದೆ ಎಂಬ ಸುದ್ದಿ ಹರಿದಾಡುತ್ತಿದೆ. ಬ್ಯಾಂಕರ್ ಕೆ.ವಿ.ಕಾಮತ್ ಅವರು ಇತ್ತೀಚೆಗೆ ರಾಷ್ಟ್ರೀಯ ಅಭಿವೃದ್ಧಿ ಬ್ಯಾಂಕ್ (ಎನ್ಡಿಬಿ) ಅಧ್ಯಕ್ಷ ಹುದ್ದೆಯನ್ನು ಐದು ವರ್ಷಗಳ ಕಾಲ ಪೂರೈಸಿದ್ದಾರೆ. ಹಾಗಾಗಿ ಭಾರತದ ಹಣಕಾಸು ಸಚಿವರ ಸ್ಥಾನಕ್ಕೆ ಸಮರ್ಥ ನಾಯಕನ ಹುಡುಕಾಟದಲ್ಲಿರುವ ಪ್ರಧಾನಿ ನರೇಂದ್ರ ಮೋದಿಯವರು ಕೆ.ವಿ.ಕಾಮತ್ ಅವರು ಈಗಿನ ಪರಿಸ್ಥಿತಿಯನ್ನು ಚೆನ್ನಾಗಿ ನಿಭಾಯಿಸಬಲ್ಲರು ಎಂದು ಭಾವಿಸಿ ಅವರನ್ನು ಹಣಕಾಸು ಸಚಿವರನ್ನಾಗಿ ಮಾಡಬಹುದು ಎಂದು ಹೇಳಲಾಗುತ್ತಿದೆ.
ಮೋದಿಯವರ ಎರಡನೇ ಅವಧಿಯು ಆರ್ಥಿಕ ದೃಷ್ಟಿಯಿಂದ ಹೆಚ್ಚು ಪ್ರಭಾವಶಾಲಿಯಾಗಿಲ್ಲ. ಮೋದಿ ಸರ್ಕಾರವು ಕುಸಿಯುತ್ತಿರುವ ಆರ್ಥಿಕತೆಯನ್ನು ಉಳಿಸುವಲ್ಲಿ ವಿಫಲವಾಗಿದೆ ಎಂದು ಪ್ರತಿಪಕ್ಷಗಳು ಬೆರಳು ತೋರಿಸುತ್ತಿವೆ. ಆದ್ದರಿಂದ ಆರ್ಥಿಕ ಪುನರುಜ್ಜೀವನ ಯೋಜನೆಗಳಿಗೆ ಬಿಜೆಪಿ ನೇತೃತ್ವದ ಎನ್ಡಿಎ ಸರ್ಕಾರವು ಹೆಚ್ಚಿನ ಆದ್ಯತೆಗಳನ್ನು ನೀಡಬೇಕಾಗಿದೆ.
ಈ ನಡುವೆ ಭಾರತದ ಹಣಕಾಸು ಮಂತ್ರಿಯಾಗಿ ಪ್ರಧಾನಿ ಅರ್ಥಶಾಸ್ತ್ರಜ್ಞ ಮತ್ತು ಬ್ಯಾಂಕರ್ ಕೆ. ವಿ. ಕಾಮತ್ ರವನ್ನು ಆಯ್ಕೆ ಮಾಡುತ್ತಾರೆ ಎಂಬುವುದು ವ್ಯಾಪಾರ ವಲಯಗಳಲ್ಲಿ ಕೇಳಿ ಬರುತ್ತಿರುವ ಹೆಸರು. ಹಾಗಾಗಿ ಆರ್ಥಿಕ ಜವಾಬ್ದಾರಿಗಳನ್ನು ನಿರ್ವಹಿಸುವಲ್ಲಿ ಬಹಳ ದೊಡ್ಡ ಮಟ್ಟದ ಅನುಭವ ಹೊಂದಿರುವ ಮಾಜಿ ಐಸಿಐಸಿಐ ಅಧ್ಯಕ್ಷ ಕೆ. ವಿ. ಕಾಮತ್ ಅವರ ಹೆಸರು ಮುಂಚೂಣಿಯಲ್ಲಿದೆ.
ಆದರೆ ಸಿಬಿಐ ಮತ್ತು ಇಡಿಗೆ ಎರಡು ಪ್ರಕರಣಗಳಲ್ಲಿ ಕೆ.ವಿ. ಕಾಮತ್ ಅವರು ಬೇಕಾಗಿದ್ದು, ಅವರ ವಿಚಾರಣೆ ನಡೆಸಲು ಕಾಯುತ್ತಿದೆ ಎಂದು ವರದಿಗಳು ತಿಳಿಸಿವೆ. ಕೆ.ವಿ.ಕಾಮತ್ ಎರಡು ಬ್ಯಾಂಕ್ ಸಾಲ ವಂಚನೆ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆಂದು ಹೇಳಲಾಗುತ್ತಿದ್ದು, ಕಾಂಗ್ರೆಸ್ ಆಡಳಿತದಲ್ಲಿ ಚಿದಂಬರಂ ಹಣಕಾಸು ಸಚಿವರಾಗಿದ್ದಾಗ ಎನ್.ಡಿ.ಟಿವಿ ಪ್ರವರ್ತಕ ಪ್ರಣಯ್ ರಾಯ್ ಅವರು ಶೆಲ್ ಹೆಸರಿನಲ್ಲಿ 40 ಕೋಟಿ ರೂಪಾಯಿ ಸಾಲ ಪಡೆದ ಪ್ರಕರಣ ಮತ್ತು ಎರಡನೆಯದು ಐಸಿಐಸಿಐ ಸಿಇಒ ಚಂದಾ ಕೊಚ್ಚಾರ್ ಅವರ ಸಾಲ ಪಡೆದ ಪ್ರಕರಣ. ಇವೆರಡರಲ್ಲೂ ಕೆ. ವಿ. ಕಾಮತ್ ಅವರು ಭಾಗಿಯಾಗಿದ್ದಾರೆ ಎಂದು ಹೇಳಲಾಗಿದೆ.
ಪ್ರಧಾನಿ ಮೋದಿ, ಬ್ಯಾಂಕ್ ಸಾಲ ವಂಚನೆ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪ ಎದುರಿಸುತ್ತಿರುವ ಕೆ.ವಿ.ಕಾಮತ್ ಅವರನ್ನು ಹಣಕಾಸು ಸಚಿವರನ್ನಾಗಿ ಆಯ್ಕೆ ಮಾಡುತ್ತಾರೋ ಅಥವಾ ನಿರ್ಮಲಾ ಸೀತಾರಾಮನ್ ಅವರೇ ಹಣಕಾಸು ಮಂತ್ರಿಯಾಗಿ ಮುಂದುವರಿಯುತ್ತಾರೋ ಎಂಬುದು ಈಗ ಮಿಲಿಯನ್ ಡಾಲರ್ ಪ್ರಶ್ನೆ.








