ನವದೆಹಲಿ: ಸಂಸತ್ ನಲ್ಲಿ ಭದ್ರತಾ ಲೋಪ ಆದ ಪ್ರಕರಣಕ್ಕೆ ಸಂಬಂಧಿಸಿದಂತೆ 6ನೇ ಆರೋಪಿಯನ್ನು ಬಂಧಿಸಲಾಗಿದೆ.
ವೀಕ್ಷಕರ ಗ್ಯಾಲರಿಯಿಂದ ಹಾರಿಬಂದು ಸ್ಮೋಕ್ ಬಾಂಬ್ (Smoke Bomb) ದಾಳಿ ನಡೆಸಿದ ಘಟನೆಗೆ ಸಂಬಂಧಿಸಿದಂತೆ 6ನೇ ಆರೋಪಿ ಮಹೇಶ್ ಕುಮಾವತ್ (Mahesh Kumawat)ನನ್ನು ಪೊಲೀಸರು ಬಂಧಿಸಿದ್ದಾರೆ.
ಮಾಸ್ಟರ್ಮೈಂಡ್ ಎನ್ನಲಾಗಿರುವ ಲಲಿತ್ ಝಾ ದೆಹಲಿಯಿಂದ ತಪ್ಪಿಸಿಕೊಳ್ಳವಲ್ಲಿ ಮಹೇಶ್ ಕುಮಾವತ್ ಸಹಾಯ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಡಿ.13ರಂದು ದೆಹಲಿಯ ಸಂಸತ್ ಭವನದಲ್ಲಿ ನಡೆದ ಘಟನೆಯನ್ನು ಮರುಸೃಷ್ಟಿಸಲು ಪೊಲೀಸರು ಸಂಸತ್ತಿನ ಅನುಮತಿ ಪಡೆಯುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಪಶ್ಚಿಮ ಬಂಗಾಳ ಮೂಲದ ಲಲಿತ್ ಝಾನನ್ನು ಪೊಲೀಸರು ಬಂಧಿಸಿದ್ದು, 7 ದಿನಗಳ ಕಾಲ ಕಸ್ಟಡಿಗೆ ಕಳುಹಿಸಲಾಗಿದೆ. ಈ ಪ್ರಕರಣದಲ್ಲಿ 6 ಜನ ಆರೋಪಿಗಳು ಭಾಗಿಯಾಗಿದ್ದು, ಇಬ್ಬರು ಸಂಸತ್ನ ಒಳಗಡೆ ಸ್ಮೋಕ್ ಬಾಂಬ್ ಸಿಡಿಸಿದರೆ ಇನ್ನಿಬ್ಬರು ಸಂಸತ್ ಭವನದ ಹೊರಗಡೆ ಸ್ಮೋಕ್ ಬಾಂಬ್ ಸಿಡಿಸಿ ಘೋಷಣೆ ಕೂಗಿದ್ದರು. ಮತ್ತೋರ್ವ ಆರೋಪಿ ಸ್ಮೋಕ್ ಬಾಂಬ್ ದಾಳಿಯ ದೃಶ್ಯ ತನ್ನ ಮೊಬೈಲ್ನಲ್ಲಿ ಸೆರೆಹಿಡಿದು ಪರಾರಿಯಾಗಿದ್ದ. ಸದ್ಯ ಆರೋಪಿಗಳನ್ನು ಬಂಧಿಸಿ, ತನಿಖೆ ನಡೆಸಲಾಗುತ್ತಿದೆ.