ಬೆಂಗಳೂರು ; ರಿಸರ್ವ ಬ್ಯಾಂಕ್ ಒಳಗೊಂಡಂತೆ ಅನೇಕ ಸಂಸ್ಥೆಗಳು ಭಾರತದ ಜಿಡಿಪಿ ಬೆಳವಣಿಗೆ ತೀವ್ರ ಕುಸಿತಕ್ಕೆ ಇಳಿಯುವ ಮುನ್ಸೂಚನೆ ಕೊಟ್ಟಿರುವುದರಿಂದ ಕೇಂದ್ರ ಮತ್ತು ರಾಜ್ಯ ಸರಕಾರಗಳು ಜನ ಸಾಮಾನ್ಯರ ಕೈಯಲ್ಲಿ ಹಣ ಉಳಿಸುವ ಮಾರ್ಗೋಪಾಯಗಳನ್ನು ಹುಡುಕಬೇಕಾಗುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಸಲಹೆ ನೀಡಿದ್ದಾರೆ.
ಈ ಸಂಬಂಧ ಸರಣಿ ಟ್ವೀಟ್ ಗಳನ್ನು ಮಾಡಿರುವ ಅವರು, ಮುಂಬರುವ ದಿನಗಳಲ್ಲಿ ಕಾಸ್ಟ್ ಆಫ್ ಲಿವಿಂಗ್ ಕಡಿಮೆ ಮಾಡುವುದು ಸರಕಾರಗಳ ಆದ್ಯತೆ ಆಗಲಿದೆ. ಲಾಕ್ ಡೌನ್ ತಗೆದ ತಕ್ಷಣವೇ ಆರ್ಥಿಕ ಸ್ಥಿತಿ ಯಥಾಸ್ಥಿತಿಗೆ ಮರಳಲಾರದು. ಜಿಡಿಪಿ ಬೆಳವಣಿಗೆ ಈ ಹಿಂದೆ ಇದ್ದ ಸ್ಥಿತಿಗೆ ಮರಳಲು ವರ್ಷಗಳೇ ಬೇಕಾಗಬಹುದು.
ಈ ಹಠಾತ್ ಶಾಕ್ ನಿಂದ ಜನ ಸಾಮಾನ್ಯರು ಸುಧಾರಿಸಿಕೊಳ್ಳಲು ಅನುವಾಗುವಂತೆ ಬಾಡಿಗೆ ಮುಂದೂಡಿಕೆ ಬದಲಾಗಿ ಭಾಗಶಃ ಬಾಡಿಗೆ ವಿನಾಯಿತಿ, ಖಾಸಗಿ ಶಾಲೆ, ಕಾಲೇಜುಗಳ ಶುಲ್ಕ ಕಡಿತ, ವಿದ್ಯುತ್ ಬಿಲ್ ಕಡಿತ, ಪೆಟ್ರೋಲ್, ಡೀಸೆಲ್ ದರ ಕಡಿತ ಘೋಷಣೆ ಮಾಡುವುದು ಸೂಕ್ತ ಎಂದಿದ್ದಾರೆ.
ಇನ್ನು ಅನೇಕ ಖಾಸಗಿ ಕಂಪನಿಗಳು ಈಗಾಗಲೇ ಸಿಬ್ಬಂದಿ ಕಡಿತ ಮತ್ತು ಸಂಬಳ ಕಡಿತ ಮಾಡುವ ತೀರ್ಮಾನ ತೆಗೆದುಕೊಂಡಿವೆ. ಮುಂದಿನ ದಿನಗಳಲ್ಲಿ ಪರಿಸ್ಥಿತಿ ಇನ್ನೂ ಬಿಗಡಾಯಿಸಲಿದೆ. ಹೀಗಾಗಿ ಸರಕಾರ ಜನ ಕಲ್ಯಾಣ ಯೋಜನೆಗಳ ಮೇಲೆ ಹೆಚ್ಚು ಖರ್ಚು ಮಾಡಬೇಕಾಗುವುದರರಿಂದ ಕುಬೇರ ಉದ್ಯೋಗಪತಿಗಳಿಂದ ಕೊರೊನಾ ತೆರಿಗೆಯನ್ನು ಸಂಗ್ರಹಿಸಲಿ.
ರೈತರು ಮತ್ತು ಅಸಂಘಟಿತ ವಲಯದ ಕಾರ್ಮಿಕರ ಜೀವನೋಪಾಯಗಳ ರಕ್ಷಣೆ ಮಾಡುವುದು ತುರ್ತಿನ ಆದ್ಯತೆಯಾಗಿದೆ. ಟ್ಯಾಕ್ಸಿ ಮತ್ತು ಆಟೋ ಚಾಲಕರು, ಗಾರ್ಮೆಂಟ್ ಕೆಲಸಗಾರರು, ಕಟ್ಟಡ ಕಾರ್ಮಿಕರು ಇತ್ಯಾದಿ ನಗರ ಪ್ರದೇಶದ ಬಡ ಸಮುದಾಯಕ್ಕೋಸ್ಕರ ಸರಕಾರ ಹೆಚ್ಚಿನ ಪರಿಹಾರ ಒದಗಿಸುವ ಕೆಲಸ ಮಾಡಬೇಕಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.








