ಜಕಾರ್ತಾ : ಜಗತ್ತನೇ ತಲ್ಲಣಗೊಳಿಸಿರುವ ಕೊರೊನಾ ವೈರಸ್ ಅನ್ನು ಇಂಡೋನೇಷ್ಯಾದ ರಕ್ಷಣ ಸಚಿವ ಮೊಹಮ್ಮದ್ ಮಹಫೂದ್ ಎಂ.ಡಿ ಅವರು ಹೆಂಡತಿಗೆ ಹೋಲಿಕೆ ಮಾಡಿ ಭಾರಿ ಟೀಕೆಗಳಿಗೆ ಒಳಗಾಗಿದ್ದಾರೆ. ಇತ್ತೀಚೆಗೆ ಜಕಾರ್ತದ ಸ್ಥಳೀಯ ವಿಶ್ವವಿದ್ಯಾಲಯವೊಂದು ಆಯೋಜಿಸಿದ್ದ ವಿಡಿಯೋ ಕಾನ್ಫರೆನ್ಸ್ ನಲ್ಲಿ ಸಚಿವ ಮೊಹಮ್ಮದ್ ಮಹಫೂದ್ ಅವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಿದ್ದಾಗ ಕೊರೊನಾ ವೈರಸ್ ಕುರಿತಂತೆ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದ ಮೀಮ್ ವೊಂದನ್ನು ಪ್ರಸ್ತಾಪಿಸಿದ್ದರು. ಇದೀಗ ಆ ಮೀಮ್ ಟೀಕೆಗೆ ಕಾರಣವಾಗಿದೆ.
ವಿಡಿಯೋ ಕಾನ್ಫರೆನ್ಸ್ ನಲ್ಲಿ ಸಚಿವರು ಮೊದಲಿಗೆ ಕೊರೊನಾ ಸಂದರ್ಭದಲ್ಲಿ ನಾವು ನಮ್ಮ ಆರೋಗ್ಯದ ಕಡೆ ಗಮನ ಹರಿಸುತ್ತಲೇ ಪರಿಸ್ಥಿತಿಗೆ ಹೊಂದಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದ್ದಾರೆ.
ಹಾಗೇ ಮಾತನಾಡುತ್ತಾ.. ಒಂದು ದಿನ ನನ್ನ ಸಹೋದ್ಯೋಗಿವೊಬ್ಬರು ಮೀಮ್ ವೊಂದನ್ನು ಕಳುಹಿಸಿದ್ದರು. ‘ಕೊರೊನಾ ನಿಮ್ಮ ಹೆಂಡತಿ ಇದ್ದಂತೆ. ಆರಂಭದಲ್ಲಿ ನೀವು ಅದನ್ನು ನಿಯಂತ್ರಿಸಲು ಪ್ರಯತ್ನಿಸುತ್ತೀರಿ. ಆದರೆ ಅದನ್ನು ನಿಯಂತ್ರಿಸಲು ಸಾಧ್ಯವಾಗಲ್ಲ ಎಂದು ತಿಳಿದುಕೊಳ್ಳುತ್ತೀರಿ. ನಂತರ ಅದರ ಜೊತೆಯೇ ಬದುಕಲು ಕಲಿಯುತ್ತೀರಿ. ಅದೇ ರೀತಿ ಕೊರೊನಾ ವೈರಸ್ ಜೊತೆಗೂ ಬದುಕಬೇಕು ಎಂಬುದು ಮೀಮ್ ನಲ್ಲಿತ್ತು’ ಎಂದು ಹೇಳಿದ್ದರು.
ಇನ್ನು ಸಚಿವ ಮೊಹಮ್ಮದ್ ಮಹಫೂದ್ ಈ ಹೇಳಿಕೆಯು ಸೋಶಿಯಲ್ ಮೀಡಿಯಾದಲ್ಲಿ ಟೀಕೆಗೆ ಗುರಿಯಾಗಿದ್ದು, ವಿದ್ಯಾರ್ಥಿಗಳು, ಮಹಿಳೆಯರು ಸೇರಿದಂತೆ ಸಾಮಾಜಿಕ ಮಾಧ್ಯಮಗಳಲ್ಲಿ ಸಕ್ರಿಯರಾಗಿರುವವರು ಸಚಿವರನ್ನು ತರಾಟೆ ತೆಗೆದುಕೊಂಡಿದ್ದಾರೆ.








