ಲಂಡನ್ : ವಿಶ್ವದಾದ್ಯಂತ ಕೊರೊನಾ ವೈರಸ್ ಅಬ್ಬರಿಸಿಬೊಬ್ಬಿರಿಯುತ್ತಿದ್ದು, ಕೊರೊನಾದಿಂದಾಗಿ ಜೀವನ ಕ್ರಮದಲ್ಲಿ ಈಗಾಗಲೇ ಹಲವು ಬದಲಾವಣೆಗಳಾಗಿವೆ. ಇದರ ಮಧ್ಯೆ ಇಂಗ್ಲೆಂಡ್, ಲಾಕ್ ಡೌನ್ ಗೆ ಸಂಬಂಧಿಸಿದಂತೆ ಮತ್ತೊಂದು ಬದಲಾವಣೆ ತಂದಿದೆ. ಸೋಂಕು ಹರಡುವುದನ್ನು ತಡೆಯಲು ಇಂಗ್ಲೆಂಡ್ ಹೊಸ ಮಾರ್ಗಸೂಚಿ ರಚಿಸಿದ್ದು, ಅಕ್ರಮ ಸಂಬಂಧವನ್ನು ಬ್ಯಾನ್ ಮಾಡಿ ಆದೇಶಿಸಿದೆ. ಈ ನಿಯಮದ ಪ್ರಕಾರ ಮನೆಯಲ್ಲಿ ಜೊತೆಯಾಗಿದ್ದರೆ ಮಾತ್ರ ಲೈಂಗಿಕ ಕ್ರಿಯೆ ನಡೆಸಬೇಕು. ಹೊರಗಿನ ವ್ಯಕ್ತಿ ಅಥವಾ ಹೆಚ್ಚು ಜನರೊಂದಿಗೆ ಲೈಂಗಿಕ ಸಂಪರ್ಕ ಹೊಂದಿದರೆ ಕಾನೂನಿಗೆ ವಿರುದ್ಧವಾಗಲಿದೆ.
ಈ ಹಿಂದೆ ಅಲ್ಲಿನ ಸರ್ಕಾರ ಲಾಕ್ ಡೌನ್ ನಲ್ಲಿ ಸೂಕ್ತ ಕಾರಣವಿಲ್ಲದೆ ಪ್ರಯಾಣಿಸುವುದು ಶಿಕ್ಷಾರ್ಹ ಅಪರಾಧ ಎಂದು ಹೇಳಿತ್ತು. ಆದರೆ ಮತ್ತೊಬ್ಬ ವ್ಯಕ್ತಿ ಭೇಟಿ ಕುರಿತು ಪ್ರಸ್ತಾಪಿಸಿರಲಿಲ್ಲ. ಇದೀಗ ಇದಕ್ಕೂ ಸರ್ಕಾರ ಬ್ರೇಕ್ ಹಾಕಿದೆ. ಒಂದು ವೇಳೆ ಇಬ್ಬರಿಗಿಂತ ಹೆಚ್ಚು ಜನ ಒಟ್ಟಿಗೆ ಸೇರಿದರೆ, ಹೊಸ ಮಾರ್ಗಸೂಚಿಗಳ ನಿಯಮದಂತೆ ಇಬ್ಬರನ್ನೂ ವಿಚಾರಣೆಗೊಳಪಡಿಸಲಾಗುವುದು ಎಂದಿದೆ.
ಇಂಗ್ಲೆಂಡಿನಲ್ಲಿ ಸೋಮವಾರ ಈ ಕಾನೂನನ್ನು ಪರಿಚಯಿಸಲಾಗಿದ್ದು, ಇದರನ್ವಯ ಸೂಕ್ತ ಕಾರಣವಿಲ್ಲದೆ ಇಬ್ಬರಿಗಿಂತ ಅಧಿಕ ಜನ ಮನೆಯೊಳಗೆ ವಾಸಿಸುವುದನ್ನು ನಿಷೇಧಿಸಲಾಗಿದೆ. ಸಾರ್ವಜನಿಕ ಅಥವಾ ಖಾಸಗಿ ಸ್ಥಳಗಳಲ್ಲಿ ಎರಡಕ್ಕಿಂತ ಹೆಚ್ಚು ಜನ ಸೇರುವಂತಿಲ್ಲ. ಯಾವುದೇ ಕೂಟಗಳಲ್ಲಿ ಭಾಗವಹಿಸುವಂತಿಲ್ಲ. ಅಲ್ಲದೆ ಮನೆಯಲ್ಲಿರುವವರೊಂದಿಗೇ ಲೈಂಗಿಕ ಕ್ರಿಯೆ ನಡೆಸಬೇಕು, ಹೊರಗಿನವರೊಂದಿಗೆ ಲೈಂಗಿಕ ಸಂಪರ್ಕ ಹೊಂದುವಂತಿಲ್ಲ ಎಂದು ನಿಯಮದಲ್ಲಿ ತಿಳಿಸಿದೆ.








