ಬೆಂಗಳೂರು : ರಾಜ್ಯ ಸರ್ಕಾರ, ಲಾಕ್ ಡೌನ್ 5ನೇ ಹಂತದ ಮಾರ್ಗ ಸೂಚಿಯನ್ನು ಪ್ರಕಟಿಸಿದ್ದು, ಜೂನ್ 8 ರಿಂದ ಮಂದಿರ, ಮಸೀದಿ, ಚರ್ಚ್ ತೆರೆಯಲಿವೆ. ಅಂದಿನಿಂದಲೇ ಮಾಲ್ ಗಳೂ ಓಪನ್ ಆಗಲಿದ್ದು, ಚಿತ್ರಮಂದಿರಗಳನ್ನು ತೆರೆಯಲು ಅನುಮತಿ ನೀಡಿಲ್ಲ. ಇನ್ನು ಲಾಕ್ ಡೌನ್ 5.0ನಲ್ಲೂ ಮದುವೆಗಳ ಮೇಲಿನ ನಿರ್ಬಂಧ ಯಥಾಸ್ಥಿತಿ ಮುಂದುವರಿಯಲಿದೆ. ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ರಾಜ್ಯದಲ್ಲಿ ನೈಟ್ ಕರ್ಫ್ಯೂ ಸಡಿಲಿಕೆ ಮಾಡಲಾಗಿದ್ದು, ಜೂನ್ 30ರವರೆಗೆ ರಾತ್ರಿ 9 ಗಂಟೆಯಿಂದ ಬೆಳಗ್ಗೆ 5ರವರಗೆ ಕರ್ಫ್ಯೂ ಇರಲಿದೆ.
ಇನ್ನು ರಾಜ್ಯದಲ್ಲಿ ಜೂನ್ 8 ರಿಂದ ಏನಿರುತ್ತೆ..? ಏನಿರಲ್ಲ ಎಂಬೋದನ್ನ ನೋಡೋದಾದ್ರೆ..
ಏನಿರುತ್ತೆ?
* ಸಾರಿಗೆ ಬಸ್ ಗಳು, ಖಾಸಗಿ ವಾಹನಗಳ ಓಡಾಟ ಇರುತ್ತೆ
* ಮಾಲ್, ಹೋಟೆಲ್, ರೆಸ್ಟೋರೆಂಟ್ ಓಪನ್
* ಎಲ್ಲ ಧಾರ್ಮಿಕ ಕೇಂದ್ರಗಳು ತೆರೆಯುತ್ತವೆ.
* ಆಟೋ, ಕ್ಯಾಬ್ ರಸ್ತೆಗಿಳಿಯುತ್ತವೆ.
ಜೂನ್ 8ರಿಂದ ಏನಿರಲ್ಲ?
* ಮೆಟ್ರೋ ಸಂಚಾರ ಇರಲ್ಲ
* ಅಡಿಟೋರಿಯಂ, ಜಿಮ್ ಕೇಂದ್ರಗಳು, ಥಿಯೇಟರ್ ಗಳು ಓಪನ್ ಆಗಲ್ಲ.
* ಜೂನ್ 30ರವರೆಗೂ ಶಾಲಾ-ಕಾಲೇಜುಗಳು ಆರಂಭಿಸುವಂತಿಲ್ಲ
* ಸಿನಿಮಾ ಹಾಲ್, ಜಿಮ್ ಸೆಂಟರ್, ಸ್ವಿಮಿಂಗ್ ಪೂಲ್, ಮನರಂಜನಾ ಕೇಂದ್ರ/ಪಾರ್ಕ್, ಬಾರ್, ಸಭಾಂಗಣ ಮತ್ತು ಅತಿ ಹೆಚ್ಚು ಜನ ಸೇರುವ ಪ್ರದೇಶಗಳನ್ನು ತೆರೆಯುವಂತಿಲ್ಲ.
* ಸಾರ್ವಜನಿಕ/ರಾಜಕೀಯ/ಕ್ರೀಡೆ/ಮನರಂಜನೆ/ಶೈಕ್ಷಣಿಕ/ ಸಾಂಸ್ಕೃತಿಕ/ಧಾರ್ಮಿಕ ಸಭೆ ಸಮಾರಂಭಗಳನ್ನು ನಡೆಸುವಂತಿಲ್ಲ.
ಇನ್ನು ಸರ್ಕಾರ ಕೊರೊನಾ ನಿಯಂತ್ರಣಕ್ಕೆ ಕೆಲ ನಿರ್ದೇಶನಗಳನ್ನು ನೀಡಿದೆ.
1. ಸಾರ್ವಜನಿಕ ಸ್ಥಳದಲ್ಲಿ, ಕಚೇರಿಯ ಒಳಗೆ, ಪ್ರಯಾಣದ ವೇಳೆ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು.
2. ಒಬ್ಬೊರಿಂದ ಮತ್ತೊಬ್ಬರ ಮಧ್ಯೆ 6 ಅಡಿ ಅಂತರ ಕಾಯ್ದುಕೊಳ್ಳಬೇಕು.
3. ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರಿ ಸಭೆ ಸಮಾರಂಭ ನಡೆಸುವಂತಿಲ್ಲ. ಮದುವೆಯಲ್ಲಿ 50ಕ್ಕಿಂತ ಹೆಚ್ಚು ಜನರು ಸೇರುವಂತಿಲ್ಲ.
4. ಸಾರ್ವಜನಿಕ ಸ್ಥಳದಲ್ಲಿ ಉಗುಳಿದರೆ ದಂಡ ವಿಧಿಸಲಾಗುವುದು.
5. ಸಾರ್ವಜನಿಕ ಸ್ಥಳದಲ್ಲಿ ಮದ್ಯ ಕುಡಿಯುವುದು, ಪಾನ್, ಗುಟ್ಕಾ, ತಂಬಾಕು ತಿನ್ನುವುದು, ಸಿಗರೇಟ್ ಸೇದುವುದು ನಿಷೇಧ.
6. ಕಂಪನಿಗಳು, ಸಂಸ್ಥೆಗಳು ಸಾಧ್ಯವಾದಷ್ಟು ವರ್ಕ್ ಫ್ರಂ ಹೋಮ್ ಅನುಸರಿಸಬೇಕು.
7. ಕೆಲಸ ಅಥವಾ ವ್ಯವಹಾರದ ಸಮಯದಲ್ಲಿ ಅಧಿಕಾರಿಗಳು, ಕೆಲಸದ ಸ್ಥಳ, ಅಂಗಡಿ, ಮಾರುಕಟ್ಟೆ, ಕೈಗಾರಿಕಾ ಮತ್ತು ವಾಣಿಜ್ಯ ಸಂಸ್ಥೆಗಳಲ್ಲಿ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಬೇಕು.
8.ಕಂಪನಿ, ವ್ಯವಹಾರದ ಸ್ಥಳಗಲ್ಲಿ ಥರ್ಮಲ್ ಸ್ಕ್ಯಾನಿಂಗ್ ವ್ಯವಸ್ಥೆ ಇರಲೇಬೇಕು. ಜೊತೆಗೆ ಸಿಬ್ಬಂದಿ ಒಳಗೆ ಹಾಗೂ ಹೊರಗೆ ಹೋಗುವ ಜಾಗದಲ್ಲಿ ಸ್ಯಾನಿಟೈಜರ್ ಇರಿಸಬೇಕು.
9. ಕಚೇರಿಯ ಡೋರ್ ಹ್ಯಾಂಡಲ್ ಸೇರಿದಂತೆ ವಿವಿಧ ಕಡೆಗಳಲ್ಲಿ ಆಗಾಗ ಸ್ಯಾನಿಟೈಜೇಷನ್ ಮಾಡಬೇಕು.








