ಲಂಡನ್, ಮೇ 25 : ಬ್ರಿಟನ್ ಪ್ರಧಾನಿಯವರ ಮುಖ್ಯ ಸಲಹೆಗಾರ ಡೊಮಿನಿಕ್ ಕಮ್ಮಿಂಗ್ಸ್ ಅವರು ಲಾಕ್‌ಡೌನ್ ನಿಯಮಗಳನ್ನು ಉಲ್ಲಂಘಿಸಿದ ಆರೋಪಕ್ಕೆ ಒಳಗಾಗಿದ್ದಾರೆ
ಡೊಮಿನಿಕ್ ಕಮ್ಮಿಂಗ್ಸ್ ಮೊದಲ ಬಾರಿ ಲಾಕ್‌ಡೌನ್ ಉಲ್ಲಂಘಿಸಿದ ಆರೋಪಕ್ಕೆ ಗುರಿಯಾದಾಗ, ತನ್ನ ಪತ್ನಿಯಲ್ಲಿ ಕೊರೊನಾ ಸೋಂಕಿನ ಲಕ್ಷಣಗಳನ್ನು ಕಂಡಾಗ ತಾನು ಪತ್ನಿ ಹಾಗೂ ಮಗುವಿನೊಂದಿಗೆ ಕಾರಿನಲ್ಲಿ ಲಂಡನ್‌ನಿಂದ ಡರಾಮ್ ಕೌಂಟಿಗೆ ತೆರಳಿದ್ದು ನಿಜವೆಂದು ಒಪ್ಪಿಕೊಂಡಿದ್ದರು. ಅಲ್ಲದೇ ಅದನ್ನು ಕಾನೂನುಬದ್ಧ ಮತ್ತು ಸಮಂಜಸ ಎಂದು ಸಮರ್ಥಿಸಿಕೊಂಡಿದ್ದರು. ಬ್ರಿಟನ್ ಸರ್ಕಾರ ಕೂಡ ಡೊಮಿನಿಕ್ ಕಮ್ಮಿಂಗ್ಸ್ ರನ್ನು ಸಮರ್ಥಿಸಿಕೊಂಡಿತ್ತು.
ಆದರೆ ಕಮ್ಮಿಂಗ್ಸ್ ಅವರು ಎಪ್ರಿಲ್ 12 ರಂದು ಡರಾಮ್‌ನಿಂದ 25 ಮೈಲು ದೂರದ ಬರ್ನಾರ್ಡ್ ಕ್ಯಾಸಲ್‌ನಲ್ಲಿ ಕಾಣಿಸಿಕೊಂಡಿದ್ದರು ಮತ್ತು ಎಪ್ರಿಲ್ 14 ರಂದು ಲಂಡನ್‌ನಲ್ಲಿ ಪ್ರತ್ಯಕ್ಷರಾಗಿದ್ದರು. ಎಪ್ರಿಲ್ 19ರಂದು ಪುನಃ ಡರಾಮ್ ಸಮೀಪ ಕಂಡುಬಂದಿದ್ದರೆಂದು ದ ಅಬ್ಸರ್ವರ್ ಮತ್ತು ಸಂಡೇ ಮಿರರ್ ಪತ್ರಿಕೆಗಳು ವರದಿ ಮಾಡಿವೆ.
ಪ್ರಧಾನಿ ಕಛೇರಿ ಇದನ್ನು ಅಲ್ಲಗಳೆದಿದ್ದು, ಪೊಲೀಸರು ಘಟನೆ ಕುರಿತಾಗಿ ಕಮ್ಮಿಂಗ್ಸ್ ಅವರ ಕುಟುಂಬದವರೊಂದಿಗೆ ಮಾತನಾಡಿದ್ದಾರೆಂಬ ವರದಿಗಳನ್ನು ಕೂಡ ತಳ್ಳಿಹಾಕಿದೆ.
ಡರಾಮ್ ಪೊಲೀಸರು ತಾವು ಕಮ್ಮಿಂಗ್ಸ್ ಅವರ ತಂದೆಯೊಂದಿಗೆ ಮಾತನಾಡಿದ್ದು, ಅವರು ತಮ್ಮ ಕುಟುಂಬದೊಂದಿಗೆ ಲಂಡನ್‌ನಿಂದ ಪ್ರಯಾಣಿಸಿರುವುದನ್ನು ಖಚಿತ ಪಡಿಸಿದ್ದಾರೆ ಎಂದು ಹೇಳಿರುವುದಾಗಿ ಪತ್ರಿಕೆಗಳು ವರದಿ ಮಾಡಿದ್ದವು.
ಜನರು ತಮಗೆ ಒಂದು ನಿಯಮ ಮತ್ತು ಉನ್ನತ ಸ್ಥಾನಗಳಲ್ಲಿರುವವರಿಗೆ ಇನ್ನೊಂದು ನಿಯಮವೆಂದು ಆಕ್ರೋಶಿತರಾಗಿರುವುದಾಗಿ ವಿಪಕ್ಷ ಲೇಬರ್ ಪಾರ್ಟಿಯ ನಾಯಕರು ಹೇಳಿದ್ದು, ತನಿಖೆಗೆ ಆಗ್ರಹಿಸಿದ್ದಾರೆ. ಸಂಸದ ಮತ್ತು ಐರೋಪ್ಯ ಸಂಶೋಧನಾ ಮಂಡಲಿ(ಆಆರ್‌ಜಿ)ಯ ಮಾಜಿ ಅಧ್ಯಕ್ಷ ಸ್ಟೀವ್ ಬೇಕರ್ ಅವರು ಕಮ್ಮಿಂಗ್ಸ್ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದ್ದು, ಈ ಮೂರ್ಖತನವನ್ನು ದೇಶ ಸಹಿಸದು ಎಂದು ಹೇಳಿದ್ದಾರೆ.








