ಬೆಂಗಳೂರು: ರಾಜ್ಯದಲ್ಲಿ ಮಹಾಮಾರಿ ಕೊರೊನಾಗೆ ಕಡಿವಾಣ ಹಾಕಲು ಮತ್ತೆ ಲಾಕ್‍ಡೌನ್ ಮೊರೆ ಹೋಗಿರುವ ರಾಜ್ಯ ಸರ್ಕಾರ, ಜುಲೈ 5ರಿಂದ ಅಕ್ಟೋಬರ್ 2ರವರೆಗೆ ಪ್ರತಿ ಭಾನುವಾರ ಲಾಕ್‍ಡೌನ್ ಮಾಡಿ ಅಧಿಕೃತ ಆದೇಶ ಹೊರಡಿಸಿದೆ.
ಭಾನುವಾರದ ಲಾಕ್‍ಡೌನ್ ಜತೆಗೆ ರಾತ್ರಿ 8ರಿಂದ ಬೆಳಿಗ್ಗೆ 5ಗಂಟೆವರೆಗೆ ರಾತ್ರಿ ಕಫ್ರ್ಯೂ ಜಾರಿ ಆದೇಶ ಹೊರಡಿಸಲಾಗಿದೆ. ಜುಲೈ5ರೊಳಗೆ ಎಸ್‍ಎಸ್‍ಎಲ್‍ಸಿ ಪರೀಕ್ಷೆಗಳು ಮುಗಿಯುತ್ತಿರುವ ಹಿನ್ನೆಲೆಯಲ್ಲಿ ಭಾನುವಾರ ಲಾಕ್‍ಡೌನ್ ಮಾಡಲಾಗುವುದು ಎಂದು ಕಂದಾಯ ಸಚಿವ ಆರ್.ಅಶೋಕ್ ನಿನ್ನೆ ಹೇಳಿದ್ದರು. ಈ ಹಿನ್ನೆಲೆಯಲ್ಲಿ ಇಂದು ಸರ್ಕಾರದಿಂದ ಅಧಿಕೃತ ಆದೇಶ ಹೊರಬಿದ್ದಿದೆ.
ರಾಜಧಾನಿ ಬೆಂಗಳೂರಿನಲ್ಲಿ ಕೊರೊನಾ ಸೋಂಕು ಸಮುದಾಯದಲ್ಲಿ ಹರಡುತ್ತಿದೆ ಎಂಬ ಭೀತಿಯ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಂಡಿದೆ.
ಹೆಚ್ಚುವರಿ ಕಾರ್ಯಪಡೆ ಎಂಬ ಮೆಗಾ ಪ್ಲ್ಯಾನ್
ರಾಜ್ಯದಲ್ಲಿ ಕೊರೊನಾ ಹರಡುವಿಕೆ ತಡೆಗೆ ತೀವ್ರ ಕಸರತ್ತು ನಡೆಸಿರುವ ರಾಜ್ಯ ಸರ್ಕಾರ, ಇಂದು ಮೂರು ಹೊಸ ಕಾರ್ಯಪಡೆಗಳನ್ನು ರಚಿಸಿ ಆದೇಶ ಹೊರಡಿಸಿದೆ.
ಖಾಸಗಿ ಮೆಡಿಕಲ್ ಕಾಲೇಜುಗಳಲ್ಲಿ ಹೆಚ್ಚುವರಿ ಬೆಡ್‍ಗಳ ವ್ಯವಸ್ಥೆ ಮಾಡಲು ಒಂದು ಕಾರ್ಯಪಡೆಗೆ ಜವಾಬ್ದಾರಿ ನೀಡಲಾಗಿದೆ
ಕೋವಿಡ್ ಕೇರ್ ಸೆಂಟರ್‍ಗಳಲ್ಲಿ ವೈದ್ಯರು, ನರ್ಸ್‍ಗಳು ಸೇರಿದಂತೆ ಸಿಬ್ಬಂದಿ ವ್ಯವಸ್ಥೆ ಮಾಡಲು 2ನೇ ಕಾರ್ಯಪಡೆಗೆ ಜವಾಬ್ದಾರಿ ನೀಡಲಾಗಿದೆ.
ಖಾಸಗಿ ಆಸ್ಪತ್ರೆಗಳಲ್ಲಿ ಕೊರೊನಾ ರೋಗಿಗಳಿಗೆ ಚಿಕಿತ್ಸೆಗೆ ಪೂರಕವಾದ ವ್ಯವಸ್ಥೆ ಮಾಡಲು ಮತ್ತೊಂದು ಕಾರ್ಯಪಡೆಯನ್ನು ರಚಿಸಲಾಗಿದೆ.