ಬೆಂಗಳೂರು : ಲಾಕ್ ಡೌನ್ ಕುರಿತಂತೆ ಅಂತಿಮ ತೀರ್ಮಾನ ನಾಳೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ. ರಾಜ್ಯದಲ್ಲಿ ಕೊರೊನಾ ಅಟ್ಟಹಾಸ ಹೆಚ್ಚಾಗುತ್ತಿದೆ. ಅದರಲ್ಲೂ ಪ್ರಮುಖವಾಗಿ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕೊರೊನಾ ರಣಕೇಕೆ ಹಾಕುತ್ತಿದೆ. ಆ ಹಿನ್ನೆಲೆಯಲ್ಲಿ ಲಾಕ್ ಡೌನ್ ಮಾಡಬೇಕು ಎಂಬ ಒತ್ತಾಯಗಳು ಕೇಳಿ ಬಂದಿವೆ.
ಇಂದು ವಿಧಾನ ಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಯಡಿಯೂರಪ್ಪ ಸದ್ಯಕ್ಕೆ ಬೆಂಗಳೂರಿನಲ್ಲಿ ಪೂರ್ಣ ಲಾಕ್ ಡೌನ್ ಇರುವುದಿಲ್ಲ. ಕೆಲವು ಏರಿಯಾಗಳಷ್ಟೇ ಲಾಕ್ ಡೌನ್ ಮಾಡಲಾಗಿದೆ. ಆ ಲಾಕ್ ಡೌನ್ ಮುಂದುವರೆಯುತ್ತಿದೆ.
ಬೆಂಗಳೂರಿನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲ್ಲೇ. ಆದ್ದರಿಂದ ಕೆಲವು ಏರಿಯಾಗಳಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗಿದೆ. ಇಂದು ಮಧ್ಯಾಹ್ನ ಕೃಷ್ಣಾದಲ್ಲಿ ಅಶೋಕ್ ಹಾಗೂ ಸಚಿವರು ಅಧಿಕಾರಿಗಳ ಸಭೆ ಕರೆದು ಕೋವಿಡ್ ತಡೆಗೆ ಕೈಗೊಳ್ಳಬೇಕಾದ ಕ್ರಮದ ಕುರಿತು ತೀರ್ಮಾನ ಮಾಡಲಾಗುತ್ತಿದೆ.
ನಾಳೆ ಬೆಂಗಳೂರಿನ ಎಲ್ಲ ಶಾಸಕರು, ಸಚಿವರು, ಸಭೆ ಸೇರಿ ಅವರೊಂದಿಗೂ ಸಭೆ ನಡೆಸಿ ಬಿಗಿ ಕ್ರಮ ಕೈಗೊಳ್ಳಲು ನಿರ್ಧರಿಸಲಾಗುತ್ತದೆ. ಕೊರೊನಾ ನಿಯಂತ್ರಣದಲ್ಲಿ ಬೆಂಗಳೂರು ದೇಶದ ಬೇರೆ ಮಹಾನಗರಗಳಿಗೆ ಹೋಲಿದರೆ ಮಾದರಿಯಾಗಿದೆ. ಅಲ್ಲದೆ ನಮ್ಮಲ್ಲಿ ಕೊರೊನಾ ಕಂಟ್ರೋಲ್ ನಲ್ಲಿದೆ. ಆದರೂ ಸಹ ಸೋಂಕು ಹೆಚ್ಚಾಗುತ್ತಿರುವ ಕಾರಣಕ್ಕೆ ನಾಳೆ ಸಭೆ ನಡೆಸಿ ಕ್ರಮ ತೀರ್ಮಾನ ಮಾಡುತ್ತೇವೆ ಎಂದು ಸಿಎಂ ಬಿ.ಎಸ್. ಯಡಿಯೂರಪ್ಪ ಹೇಳಿದರು.