ನವದೆಹಲಿ : ದೇಶದಲ್ಲಿ ಲಾಕ್ ಡೌನ್ 4.0 ಮುಕ್ತಾಯಕ್ಕೆ 4 ದಿನಗಳು ಮಾತ್ರ ಬಾಕಿ ಇದೆ. ಈ ಹಿನ್ನೆಲೆ ಮೇ 31ರ ಬಳಿಕ ಮುಂದೇನು ಎಂಬ ಪ್ರಶ್ನೆ ಎಲ್ಲರಲ್ಲೂ ಮೂಡಿದ್ದು, ಕೇಂದ್ರ ಸರ್ಕಾರ ಮತ್ತೆರಡು ವಾರಗಳ ಕಾಲ ಲಾಕ್ ಡೌನ್ ವಿಸ್ತರಣೆ ಮಾಡುವ ಲೆಕ್ಕಾಚಾರದಲ್ಲಿದೆಯಂತೆ. ಜೂನ್ 1ರಿಂದ 14ರ ವರೆಗೂ ಎರಡು ವಾರಗಳ ಕಾಲ ಲಾಕ್ ಡೌನ್ ವಿಸ್ತರಣೆ ಆಗಲಿದ್ದು, ಈ ಬಗ್ಗೆ ಮೇ 31ರ ‘ಮನ್ ಕೀ ಬಾತ್’ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅಧಿಕೃತ ಘೋಷಣೆ ಮಾಡಲಿದ್ದಾರೆ ಎಂದು ಗೃಹ ಇಲಾಖೆ ಮೂಲಗಳು ತಿಳಿಸಿವೆ.
ಅಧಿಕಾರಿಗಳ ಜೊತೆ ಚರ್ಚೆ
ಈಗಾಗಲೇ ಲಾಕ್ ಡೌನ್ ವಿಸ್ತರಣೆಗೆ ನಿರ್ಧರಿಸಿರುವವವ ಗೃಹ ಇಲಾಖೆ, ಲಾಕ್ ಡೌನ್ 5.0 ನಲ್ಲಿ ನೀಡಬೇಕಾದ ವಿನಾಯಿತಿಗಳ ಬಗ್ಗೆ ಚಿಂತನೆ ನಡೆಸುತ್ತಿದೆ, ಈ ಸಂಬಂಧ ಚರ್ಚೆ ನಡೆಸಲು ಕೇಂದ್ರ ಸಂಪುಟ ಕಾರ್ಯದರ್ಶಿ ರಾಜೀವ್ ಗೌಬಾ ಎಲ್ಲ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳ ಜೊತೆಗೆ ವಿಡಿಯೋ ಕಾನ್ಫರೆನ್ಸ್ ಸಭೆ ನಡೆಸುತ್ತಿದ್ದಾರೆ.
ಈ ಸಭೆಯಲ್ಲಿ ಲಾಕ್ ಡೌನ್ 5.0ನ ಬ್ಲೂ ಪ್ರಿಂಟ್ ಸಿದ್ಧಪಡಿಸಲಿದ್ದಾರೆ. ಐದನೇ ಹಂತದ ಲಾಕ್ ಡೌನ್ ಸಿದ್ಧತೆಯಲ್ಲಿರುವ ಕೇಂದ್ರ ಸರ್ಕಾರ ಆರೋಗ್ಯ ಇಲಾಖೆ ಮೂಲಕ 11 ನಗರಗಳನ್ನು ಗುರುತಿಸಿದೆ. ದೆಹಲಿ, ಮುಂಬೈ, ಬೆಂಗಳೂರು, ಚೆನೈ, ಅಹಮಾದಾಬಾದ್, ಕೊಲ್ಕತ್ತಾ, ಪುಣೆ, ಥಾಣೆ, ಜೈಪುರ್, ಸೂರತ್ ಮತ್ತು ಇಂದೋರ್ ನಲ್ಲಿ ದೇಶದಲ್ಲಿರುವ ಒಟ್ಟು ಕೊರೊನಾ ಸೋಂಕಿತರ ಪೈಕಿ ಶೇ.70 ರಷ್ಟು ಸೋಂಕಿತರಿದ್ದು ಇಲ್ಲಿ ವಿಶೇಷ ಮುತುವರ್ಜಿ ವಹಿಸುವ ಸಾಧ್ಯತೆ ಇದೆ. ಹೀಗಾಗಿ 11 ನಗರಗಳ ಕಮಿಷನರ್ ಗಳ ಜೊತೆಗೂ ರಾಜೀವ್ ಗೌಬಾ ಚರ್ಚೆ ನಡೆಸಲಿದ್ದಾರೆ.
ಇನ್ನು ಲಾಕ್ ಡೌನ್ 5.0ನಲ್ಲಿ ಮಾಲ್, ಸಿನಿಮಾ ಥಿಯೇಟರ್, ಶಾಪಿಂಗ್ ಮಾಲ್, ಶೈಕ್ಷಣಿಕ ಚಟುವಟಿಕೆಗಳು, ಬೃಹತ್ ಧಾರ್ಮಿಕ, ರಾಜಕೀಯ, ಸಾಂಸ್ಕೃತಿಕ ಕಾರ್ಯಕ್ರಮಗಳು, ಸಂತೆ, ಜಾತ್ರೆ, ಉತ್ಸವದಂತಹ ಹೆಚ್ಚು ಜನರು ಸೇರುವ ಪ್ರದೇಶ ಮತ್ತು ಕಾರ್ಯಕ್ರಮಗಳಿಗೆ ನಿರ್ಬಂಧ ಮುಂದುವರಿಸಬಹುದು.
ಜಿಮ್, ಬಾರ್, ರೆಸ್ಟೋರೆಂಟ್, ಪಾರ್ಟಿ ಹಾಲ್ ಆರಂಭಿಸುವುದು. ದೇವಸ್ಥಾನ, ಚರ್ಚೆ, ಮಸೀದಿ ತೆರೆಯುವುದು, ಮೆಟ್ರೊ ಸಂಚಾರ ಆರಂಭ, ನಿಷೇಧಾಜ್ಞೆ ಸಮಯ ವಿಸ್ತರಣೆ, ಅಂತರಾಜ್ಯ ಮುಕ್ತ ಸಂಚಾರ, ಸೀಮಿತ ಅಂತರಾಷ್ಟ್ರೀಯ ವಿಮಾನಗಳ ಹಾರಾಟ, ಮತ್ತಷ್ಟು ಹೆಚ್ಚುವರಿ ರೈಲುಗಳ ಸಂಚಾರಕ್ಕೆ ಸಂಬಂಧಿಸಿದಂತೆ ನಿರ್ಧಾರ ತೆಗೆದುಕೊಳ್ಳುವ ಅಧಿಕಾರ ರಾಜ್ಯ ಸರ್ಕಾರಗಳಿಗೆ ನೀಡಬಹುದು ಎನ್ನಲಾಗಿದೆ.








