ಜೀವ ಉಳಿಸಲು ಲಾಕ್ ಡೌನ್ ಅನಿವಾರ್ಯ… ಗೃಹ ಸಚಿವರ ಮಾತು
ಜೀವ ಉಳಿಸಲು ಲಾಕ್ ಡೌನ್ ಅನಿವಾರ್ಯವಾಗುತ್ತದೆ ಅದಕ್ಕೆ ಜನ ಅವಕಾಶ ಮಾಡಿಕೊಡಬಾರದು ಎಂದು ಗೃಹ ಸಚಿವರು ಹೇಳಿದ್ದಾರೆ. ಇದು ಕರ್ನಾಟಕದಲ್ಲಿ ಮತ್ತೊಮ್ಮೆ ಲಾಕ್ಡೌನ್ ಜಾರಿಗೆ ತರಲು ಸರ್ಕಾರ ಮುಂದಾಗಲಿದೆಯಾ ಎಂಬುದನ್ನ ಸೂಚಿಸುವಂತಿದೆ.
ಚಿಕ್ಕಮಗಳೂರು ಜಿಲ್ಲೆಯಲ್ಲಿ 15 ರಿಂದ 18 ವಯೋಮಾನದ ಮಕ್ಕಳಿಗೆ ಕೊರೋನಾ ಲಸಿಕೆ ನೀಡುವ ಅಭಿಯಾನಕ್ಕೆ ಇಂದು ಗೃಹ ಸಚಿವ ಆರಗ ಜ್ಞಾನೇಂದ್ರ ಚಾಲನೆ ನೀಡಿದ ಬಳಿಕ ಮಾದ್ಯಮದವರೊಂದಿಗೆ ಮಾತನಾಡಿದರು.
ಜನರು ಎಚ್ಚರಿಕೆಯಿಂದ ವರ್ತಿಸಬೇಕಿದೆ. ಮಾಸ್ಕ್ ಧರಿಸುವುದು, ಅಂತರ ಕಾಪಾಡಿಕೊಳ್ಳುವುದು ಕಡ್ಡಾಯವಾಗಿದೆ. ಸಾರ್ವಜನಿಕರು ಸರ್ಕಾರದೊಂದಿಗೆ ಕೈಜೋಡಿಸಿದರೆ ಮಾತ್ರ, ಯಶಸ್ಸು ಸಾಧ್ಯ . ನಿರ್ಲಕ್ಷ್ಯ ತೋರಿ ಅಪಾಯಕ್ಕೆ ದಾರಿಮಾಡಿಕೊಡಬಾರದು. ಎಂದು ತಿಳಿಸಿದರು.
ಲಸಿಕೀಕರಣ ಇತರೆ ಜಿಲ್ಲೆಗಳಿಗೆ ಹೋಲಿಸಿದರೆ ಹೆಚ್ಚಿನ ಪ್ರಮಾಣದಲ್ಲಿದೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಶೇಕಡ 97ರಷ್ಟು ಮೊದಲ ಡೋಸ್, ಶೇಕಡ 81ರಷ್ಟು 2ನೇ ಡೋಸ್ ಲಸಿಕೆ ನೀಡಲಾಗಿದೆ. ಇದಕ್ಕಾಗಿ ಜಿಲ್ಲಾಡಳಿತ ಹಾಗೂ ಆರೋಗ್ಯ ಕಾರ್ಯಕರ್ತರನ್ನು ಅಭಿನಂದಿಸುತ್ತೇನೆ ಎಂದರು. ಮೂರನೇ ಅಲೆ ತಡೆಯಲು ರಾಜ್ಯ ಸರ್ಕಾರ ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಂಡಿದೆ ಎಂದು ತಿಳಿಸಿದರು.