ಬೆಂಗಳೂರು: ಪುಟ್ಟ ಮಕ್ಕಳಿಂದ ಹಿಡಿದು ವೃದ್ಧರವರೆಗೂ ಲಾಕ್ಡೌನ್, ಸೀಲ್ಡೌನ್, ಮಾಸ್ಕ್, ಸೋಷಿಯಲ್ ಡಿಸ್ಟೆನ್ಸ್
(ಸಾಮಾಜಿಕ ಅಂತರ), ಕ್ವಾರಂಟೈನ್ ಅನ್ನೋ ಪದಗಳು ನಾಲಿಗೆ ತುದಿಯಲ್ಲಿಂದು ಹರಿದಾಡುತ್ತಿವೆ. ಇದಕ್ಕೆಲ್ಲಾ ಕಾರಣ ಮಹಾಮಾರಿ ಕೊರೊನಾ ವೈರಸ್.
ಆದರೆ, ಲಾಕ್ಡೌನ್, ಮಾಸ್ಕ್, ಕ್ವಾರಂಟೈನ್ ಕಾನ್ಸೆಪ್ಟ್ ಇಂದು ನಿನ್ನೆಯದಲ್ಲ. ಬರೋಬ್ಬರಿ 102 ವರ್ಷಗಳ ಹಿಂದೆಯೇ ನಮ್ಮ ಬೆಂಗಳೂರು ಸೇರಿದಂತೆ ಹಲವು ದೇಶಗಳಲ್ಲಿ ಲಾಕ್ಡೌನ್, ಮಾಸ್ಕ್ ಕಡ್ಡಾಯ ಎಂಬ ನಿಯಮಗಳು ಜಾರಿಗೆ ಬಂದಿದ್ದವು. ನಮ್ಮ ಇಂದಿನ ಹಿರಿಯರು ಇದೆಲ್ಲಾ ನಮಗೆ ಹೊಸತು. ನಮ್ಮ ಕಾಲದಲ್ಲಿ ಮಾಸ್ಕ್, ಸ್ಯಾನಿಟೈಸರ್, ಲಾಕ್ಡೌನ್, ಕ್ವಾರಂಟೈನ್ ಅಂದ್ರೆ ಗೊತ್ತೇ ಇರಲಿಲ್ಲ ಗೊಣಗುತ್ತಾರೆ.
ಆದರೆ, ನೂರು ವರ್ಷಗಳ ಹಿಂದೆಯೇ ಇವೆಲ್ಲಾ ಇದ್ದವು ಎಂಬುದಕ್ಕೆ ಪುಷ್ಠಿ ನೀಡುವಂತಹ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. 1918ರಲ್ಲಿ ಕೊರೊನಾ ಮಾದರಿಯ ಸ್ಪಾನಿಶ್ ಇನ್ಫ್ಲುಯೆಂಜಾ ವೈರಸ್ ಅಟ್ಟಹಾಸಕ್ಕೆ ಭಾರತ ಸೇರಿದಂತೆ ಇಡೀ ಪ್ರಪಂಚ ತತ್ತರಿಸಿ ಹೋಗಿತ್ತು.

1918ರಲ್ಲಿ ಲಾಕ್ಡೌನ್..!
ಹೌದು, 1918ರ ಅಕ್ಟೋಬರ್ 19ರಂದು ಇಂದಿನ ಉತ್ತರ ಅಮೆರಿಕದ ಕೆನಡಾ ರಾಜ್ಯದ ಕೆಲೋನಾ ನಗರದಲ್ಲಿ ಲಾಕ್ಡೌನ್ ಮಾಡಲಾಗಿತ್ತು. ಅಂದು ಸ್ಪಾನಿಶ್ ವೈರಸ್ ಎಂಬ ಮಹಾಮಾರಿ ವೈರಸ್, ಕೆನಡಾ ರಾಜ್ಯದಲ್ಲಿ ಸಾವಿರಾರು ಜನರಿಗೆ ತಗುಲಿ ಸಾವು-ನೋವು ಉಂಟು ಮಾಡಿತ್ತು.
ಈ ಹಿನ್ನೆಲೆಯಲ್ಲಿ ಕೆಲೊನಾ ನಗರದ ಮೇಯರ್ ಡಿ.ಡಬ್ಲೂ ಸದರ್ಲ್ಯಾಂಡ್ ಲಾಕ್ಡೌನ್ ಮಾಡಿದ್ದರು. ಆದರೆ ಅಂದು ಲಾಕ್ಡೌನ್ ಪದ ಬಳಕೆ ಮಾಡಿರಲಿಲ್ಲ. ಆದರೆ, ಸ್ಪಾನಿಶ್ ಫ್ಲೂ ಹರಡುವುದನ್ನು ತಪ್ಪಿಸಲು ಶಾಲಾ-ಕಾಲೇಜು, ಚರ್ಚ್ಗಳು, ಸಿನಿಮಾ ಮಂದಿರಗಳು, ಸಂಚಾರಿ ಥಿಯೇಟರ್ಗಳು, ಸ್ವಿಮ್ಮಿಂಗ್ ಪೂಲ್, ಅಮ್ಯೂಸ್ಮೆಂಟ್, ಲಾಡ್ಜ್ಗಳ ಬಂದ್ ಸೇರಿದಂತೆ ಇಡಿ ನಗರದಲ್ಲಿ ಮಾನವ ಚಟುವಟಿಕೆ ನಿರ್ಭಂದಿಸಿ ಆದೇಶ ಹೊರಡಿಸಿದ್ದ ಸಾರ್ವಜನಿಕ ನೋಟಿಸ್ ವೈರಲ್ ಆಗಿದೆ. ಇದನ್ನೇ ನಾವು ಈಗ ಲಾಕ್ಡೌನ್ ಎಂದು ಬೇರೆ ಹೆಸರಲ್ಲಿ ಕರೆಯುತ್ತಿದ್ದೇವೆ.
ಮಾಸ್ಕ್ ಬಳಕೆಗೂ ಆದೇಶ
ಸ್ಪಾನಿಶ್ ಫ್ಲೂ ಇಡೀ ಜಗತ್ತಿನಾದ್ಯಂತ ಮನುಷ್ಯರ ಮಾರಣ ಹೋಮವನ್ನೇ ನಡೆಸುತ್ತಿತ್ತು. ಸ್ಪಾನಿಶ್ ಫ್ಲೂನಿಂದ ಬಚಾಚಾಗಲು ಮಾಸ್ಕ್ ಧರಿಸುವಂತೆ ಸೂಚಿಸಲಾಗಿತ್ತು.


ಕೆಮ್ಮುವಾಗ ಹಾಗೂ ಸೀನುವಾಗ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಅಗತ್ಯವಿಲ್ಲದಿದ್ದರೆ ಯಾರೂ ಮನೆಗಳಿಂದ ಹೊರಗೆ ಬರಬಾರದು. ಯಾರಾದರೂ ಸೀನಿದರೆ, ಕೆಮ್ಮಿದರೆ ದೂರು ಇದ್ದು ಸಾಮಾಜಿಕ ಅಂತರ ಕಾಪಾಡಿಕೊಳ್ಳಿ ಎಂದು ಸೂಚನೆ ನೀಡಲಾಗಿತ್ತು.
ಬೆಂಗಳೂರಿನಲ್ಲೂ 1928ರಲ್ಲೇ ಆಗಿತ್ತಾ ಲಾಕ್ಡೌನ್..!
ಹೌದು, ಬೆಂಗಳೂರು ನಗರ 1928ರಲ್ಲೇ ಲಾಕ್ಡೌನ್ಗೆ ಸಾಕ್ಷಿಯಾಗಿದೆ. ಆದರೆ, ಇಂದಿನ ಲಾಕ್ಡೌನ್ಗೆ ಹೋಲಿಕೆ ಮಾಡಲಾಗದೇ ಹೋದರೋ, ಅಂದು ಜನ ಮನೆಯಿಂದ ಹೊರ ಬರದಂತೆ, ಹೆಚ್ಚು ಜನ ಸೇರುವ ಸಿನಿಮಾ ಮಂದಿರ, ನಾಟಕಗಳಿಗೆ ಹೋಗಬಾರದು ಎಂದು ಅಂದಿನ ಬೆಂಗಳೂರು ಸಿಟಿ ಮುನ್ಸಿಪಲ್ ಕೌನ್ಸಿಲ್ನ ಆರೋಗ್ಯ ಇಲಾಖೆ ನೀಡಿದ್ದ ನೋಟಿಸ್ ವೈರಲ್ ಆಗಿದೆ.


1918ರಲ್ಲಿ ಕಾಣಿಸಿಕೊಂಡಿದ್ದ ಇನ್ಫ್ಲುಯೆಂಜಾ ಮಾದರಿಯ ಸಾಂಕ್ರಾಮಿಕ ವೈರಸ್ನಿಂದಾ ಜನರು ಕೆಮ್ಮು, ಜ್ವರ, ನೆಗಡಿಯಂತಹ ಲಕ್ಷಣಗಳಿಂದ ಬಳಲುತ್ತಿದ್ದರು. ಹೀಗಾಗಿ ಈ ಸೋಂಕಿನಿಂದ ರಕ್ಷಿಸಿಕೊಳ್ಳಲು ಜನರು ಪಾಲಿಸಬೇಕಾದ ಸೂಚನೆಗಳನ್ನು ನೋಟಿಸ್ನಲ್ಲಿ ಪ್ರಕಟಿಸಲಾಗಿತ್ತು.
ನೋಟಿಸ್ನ ಕೆಲವು ಸೂಚನೆಗಳು ಕೆಳಗಿನಂತಿವೆ…
1.ಜನರು ಗುಂಪಾಗಿ ಸೇರುವ ಸ್ಥಳಗಳು ಅಂದರೆ ಸಿನಿಮಾ, ನಾಟಕ ಇವುಗಳಿಗೆ ಹೋಗಬಾರದು( ಇದರ ಅರ್ಥವೇ ಅಂದಿನ ಲಾಕ್ಡೌನ್)
2. ಕೆಮ್ಮುತ್ತಿರುವವ ಸಮೀಪ ಸೇರಬಾರದು (ಸೋಷಿಯಲ್ ಡಿಸ್ಟೆನ್ಸ್)
3. ರಾತ್ರಿ-ಹಗಲು ಒಳ್ಳೆ ಗಾಳಿ ಬೀಸುವ ಜಾಗದಲ್ಲಿ ಇರಬೇಕು
4. ದೇಹಕ್ಕೂ ಮನಸ್ಸಿಗೂ ಆಲಸ್ಯವಾಗುವಂತೆ ದುಡಿಮೆ ಕೆಲಸ ಮಾಡಬಾರದು( ಹೋಂ ಕ್ವಾರಂಟೈನ್ )
5. ಸಾಂಕ್ರಾಮಿಕ ರೋಗದಿಂದ ದೂರವಿರಲು ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಬೇಕು. ಇದಕ್ಕೆ ಪೂರಕವಾಗಿ ಅರಿಶಿಣ, ದಾಲ್ಚಿನ್ನಿ, ಲವಂಗ, ಮೆಣಸು, ಒಣಗಿದ ಶುಂಠಿ, ಬೆಳ್ಳುಳ್ಳಿಯ ಜತೆಗೆ ಸಕ್ಕರೆಯನ್ನು ಸೇರಿಸಿಕೊಂಡು ಕಷಾಯ ಮಾಡಿಕೊಂಡು ದಿನಕ್ಕ ಎರಡು ಅಥವಾ ಮೂರು ಬಾರಿ ತೆಗೆದುಕೊಳ್ಳುವುದು ಒಳ್ಳೆಯದು ಎಂದು 1928 ಮಾರ್ಚ್11ರಂದು ಬೆಂಗಳೂರು ನಗರ ಮುನ್ಸಿಪಲ್ ಕೌನ್ಸಿಲ್(ಇಂದು ಅದು ಬಿಬಿಎಂಪಿ) ಅರೋಗ್ಯ ಅಧಿಕಾರಿ ಜೆ.ವಿ ಮಾಸ್ಕರ್ನೆಹಾಸ್ ಸಾರ್ವಜನಿಕ ಪ್ರಕಟಣೆ ಹೊರಡಿಸಿದ್ದರು.
ಇದನ್ನೆಲ್ಲಾ ನೋಡಿದರೆ ಸಾಂಕ್ರಾಮಿಕ ರೋಗಳ ತಡೆಗೆ ಲಾಕ್ಡೌನ್, ಮಾಸ್ಕ್, ಸಾಮಾಜಿಕ ಅಂತರ, ಹೋಂ ಕ್ವಾರಂಟೈನ್ನಂತಹ ಮಾರ್ಗಗಳನ್ನು 100 ವರ್ಷಗಳ ಹಿಂದೆಯೇ ನಮ್ಮ ಪೂರ್ವಿಜರು ಅನುಭವಿಸಿದ್ದರು ಎಂಬುದಕ್ಕೆ ಈ ದಾಖಲೆಗಳು ಪುಷ್ಠಿ ನೀಡುತ್ತಿವೆ.










