ಬೆಂಗಳೂರು ; ಜನ ಹಸಿವಿನಿಂದ ಸಾಯುವುದನ್ನು ತಪ್ಪಿಸಲು ಲಾಕ್ ಡೌನ್ ಸಡಿಲಿಸಲೇ ಬೇಕು. ಆದರೆ ಸಡಿಲಿಕೆ ಮಾಡುವಾಗ ವಿವೇಚನೆ ಬಳಸಬೇಕು. ಸೋಂಕು ಹರಡದಂತೆ ಮುನ್ನೇಚ್ಚರಿಕೆ ವಹಿಸಬೇಕು ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಸಲಹೆ ನೀಡಿದ್ದಾರೆ.
ಕೆ.ಆರ್.ಪುರಂನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆರ್ಥಿಕ ಚಟುವಟಿಕೆಗಳ ದೃಷ್ಠಿಯಿಂದ ಲಾಕ್ ಡೌನ್ ಸಡಿಲಿಸಬೇಕಿದೆ. ಇಲ್ಲವಾದರೆ ರಾಜ್ಯ ಸರ್ಕಾರಕ್ಕೆ ವೇತನ ನೀಡಲು ಹಣವಿಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಲಿದೆ. ಆದರೆ ಲಾಕ್ ಡೌನ್ ಸಡಿಲಿಕೆಯನ್ಜು ಎಚ್ಚರಿಕೆಯಿಂದ ಮಾಡಬೇಕು. ರೆಡ್ ಝೋನ್ ನಲ್ಲಿ ಜನ ಸಂಪರ್ಕವನ್ನು ನಿಯಂತ್ರಿಸಬೇಕು. ಸಾಮಾಜಿಕ ಅಂತರವನ್ನು ಪಾಲನೆ ಮಾಡಬೇಕು. ಉಳಿದಂತೆ ಹಸಿರು ಮತ್ತು ಕಿತ್ತಳೆ ವಲಯಗಳಲ್ಲಿ ಲಾಕ್ ಡೌನ್ ಸಡಿಲಿಕೆ ಮಾಡಬೇಕು ಎಂದು ಹೇಳಿದರು.
ಇನ್ನು ಒಂದು ತಿಂಗಳಿನಿಂದ ಎಲ್ಲಾ ಚಟುವಟಿಕೆಗಳು ಬಂದ್ ಆಗಿದ್ದರಿಂದ ಜನರಲ್ಲಿ ಖರೀದಿ ಶಕ್ತಿ ಇಲ್ಲವಾಗಿದೆ. ಸರ್ಕಾರ ಕೂಡಲೇ ವಿಶೇಷವಾದ ಆರ್ಥಿಕ ಪ್ಯಾಕೇಜ್ ಅನ್ನು ಘೋಷಣೆ ಮಾಡಬೇಕು. ಆಗ ಮಾತ್ರ ಮಾರುಕಟ್ಟೆ ಚೇತರಿಕೆ ಕಾಣಲು ಸಾಧ್ಯ. ಸರ್ಕಾರಕ್ಕೆ ತೆರಿಗೆ ಬದಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಸಂಪೂರ್ಣ ಲಾಕ್ ಡೌನ್ ಅನ್ನು ಹೀಗೆ ಮುಂದುವರೆಸಿದರೆ ನಿರುದ್ಯೋಗದ ಸಮಸ್ಯೆ ಹೆಚ್ಚಾಗುತ್ತದೆ. ಜನ ಹಸಿವಿನಿಂದ ಬಳಲುತ್ತಾರೆ. ರಾಜ್ಯದಲ್ಲಿ ಹಸಿವಿನಿಂದ ಯಾರು ಸಾಯಬಾರದು. ಈವರೆಗೂ ಜನಪ್ರತಿನಿಧಿಗಳು ಮತ್ತು ಸಂಘ ಸಂಸ್ಥೆಗಳು ಸ್ವಂತ ಖರ್ಚಿನಲ್ಲಿ ಬಡ ಜನರಿಗೆ ಆಹಾರ ಮತ್ತು ದವಸ ಧಾನ್ಯಗಳನ್ನು ಹಂಚಿದ್ದಾರೆ. ಜನರ ಹಸಿವು ನಿಗಿಸುವಲ್ಲಿ ಸರ್ಕಾರಕ್ಕಿಂತಲೂ ಸಂಘ ಸಂಸ್ಥೆಗಳ ಪಾತ್ರ ದೊಡ್ಡದಿದೆ. ಇಲ್ಲವಾದರೆ ಜನ ಹಸಿವಿನಿಂದ ಬೀದಿಗಿಳಿದು ಹೋರಾಟ ಮಾಡಬೇಕಿತ್ತು ಎಂದರು. ರಾಜ್ಯದ ಮುಖ್ಯಮಂತ್ರಿ ಯಡಿಯೂರಪ್ಪ ಸ್ವಂತವಾಗಿ ಯೋಚಿಸುವುದನ್ನೇ ಬಿಟ್ಟು ಬಿಟ್ಟಿದ್ದಾರೆ. ಅಧಿಕಾರಿಗಳು ಬರೆದುಕೊಟ್ಟಿದ್ದನ್ನು ಮಾತ್ರ ಓದುತ್ತಿದ್ದಾರೆ ಎಂದು ಲೇವಡಿ ಮಾಡಿದ ಅವರು, ಸಂಕಷ್ಟದ ಕಾಲದಲ್ಲಿ ಅನಗತ್ಯ ಖರ್ಚುಗಳಿಗೆ ಕಡಿವಾಣ ಹಾಕಬೇಕು ಎಂದು ಹೇಳಿದರು.