ಬೆಂಗಳೂರು: ರಾಜ್ಯದಲ್ಲಿ ಕಂಟೈನ್ ಮೆಂಟ್ ಪ್ರದೇಶಗಳನ್ನು ಹೊರತುಪಡಿಸಿ ಉಳಿದ ಕಡೆಗಳಲ್ಲಿ ಮೇ 4ರ ನಂತರ ಲಾಕ್ ಡೌನ್ ಸಡಿಲಿಕೆ ಬಗ್ಗೆ ಕೇಂದ್ರ ಸರ್ಕಾರದಿಂದ ಸ್ಪಷ್ಟ ಮಾಹಿತಿ ಸಿಕ್ಕಿದೆ ಎಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ತಿಳಿಸಿದ್ದಾರೆ.
ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ಕೊರೊನಾ ಸೋಂಕು ಹೆಚ್ಚಿನ ಪ್ರಕರಣಗಳು ವರದಿಯಾಗಿರುವ ಕಂಟೈನ್ ಮೆಂಟ್ ಪ್ರದೇಶಗಳಲ್ಲಿ ಮೇ 4ರ ಬಳಿಕವೂ ಲಾಕ್ ಡೌನ್ ಮುಂದುವರೆಯಲಿದೆ. ಆದರೆ, ಉಳಿದ ವಲಯಗಳಲ್ಲಿ ಲಾಕ್ ಡೌನ್ ಸಡಿಲಿಕೆ ಮಾಡಲಾಗುತ್ತಿದೆ.ಈ ಸಂಬಂಧ ಕೇಂದ್ರ ಸರ್ಕಾರದಿಂದ ಸ್ಪಷ್ಟ ಮಾಹಿತಿ ದೊರೆತಿದೆ. ಸದ್ಯದಲ್ಲಿಯೇ ಮಾರ್ಗಸೂಚಿಗಳು ಸಿಗಲಿವೆ ಎಂದರು.
ಇನ್ನು ಮೇ ನಾಲ್ಕರ ನಂತರ ಪ್ರಧಾನಿ ಮೋದಿ ಮತ್ತೆ ಲಾಕ್ ಡೌನ್ ಸಡಿಲಿಕೆ ಬಗ್ಗೆ ತಿಳಿಸಲಿದ್ದಾರೆ. ಕಂಟೈನ್ಮೆಂಟ್ ಜೋನ್ ಹೊರತುಪಡಿಸಿ ಮೇ ನಾಲ್ಕರಿಂದ ಗ್ರೀನ್ ಜೋನ್ ಗಳಲ್ಲಿ ಕಾರ್ಖಾನೆ ಆರಂಭವಾಗಲಿದೆ. ಈ ಬಗ್ಗೆ ಇಂದು ಸಂಜೆ ಪ್ರಮುಖ ಕೈಗಾರಿಕೋದ್ಯಮಿಗಳ ಜತೆ ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದ ಬಿಎಸ್ ವೈ, ಇನ್ನೂ ಎರಡ್ಮೂರು ತಿಂಗಳು ಲಾಕ್ ಡೌನ್ ಮುಂದುವರಿದರೂ ಆಶ್ಚರ್ಯಪಡಬೇಕಿಲ್ಲ ಎಂದಿದ್ದಾರೆ.
ಇದೇ ವೇಳೆ ಮಾಲ್ ಓಪನ್ ಮಾಡುವ ಬಗ್ಗೆ ಮಾತನಾಡಿದ ಸಿಎಂ, ಮಾಲ್ ಗಳನ್ನು ತೆರೆಯುವ ಬಗ್ಗೆ ತೀರ್ಮಾನ ಆಗಿಲ್ಲ. ಮೇ ಮೂರು, ಅಥವಾ ನಾಲ್ಕರ ನಂತರ ತೀರ್ಮಾನ ಕೈಗೊಳ್ಳುತ್ತೇವೆ. ನಮಗೆ ಅನುಕೂಲಕರ ವಾತಾವರಣ ನಿರ್ಮಾಣವಾಗುತ್ತದೆ ಎನ್ನುವ ನಿರೀಕ್ಷೆ ಇದೆ. ಕರ್ನಾಟಕದಲ್ಲಿ ಕೊರೊನಾ ನಿಯಂತ್ರಣಕ್ಕೆ ಬರುತ್ತಿದೆ. ಬೆಂಗಳೂರಿನಲ್ಲಿ ಕಡಿಮೆಯಾಗುತ್ತಿದೆ ಎಂದು ತಿಳಿಸಿದ್ದಾರೆ. ಹಾಗೇ ಸಾರ್ವಜನಿಕರು ಆತಂಕಕ್ಕೆ ಒಳಗಾಗುವುದು ಬೇಡ. ಸೋಂಕಿನಿಂದ ಚೇತರಿಕೆ ಆಗಿರುವವರು ಇತರರಿಗೆ ಧೈರ್ಯ ತುಂಬಬೇಕು. ವಾರಿಯರ್ಸ್ ಗಳು ಆತ್ಮಸ್ಥೈರ್ಯ ತುಂಬಬೇಕು. ಎಲ್ಲರೂ ಒಗ್ಗೂಡಿ ಇದನ್ನು ಹೋಗಲಾಡಿಸಲು ಶ್ರಮಿಸೋಣ ಎಂದು ಸಿಎಂ ಕರೆ ನೀಡಿದ್ದಾರೆ.