ಲಾಕ್ ಡೌನ್ ಮಾಡಿದ್ರೆ ಜನ ಸಾಯ್ತಾರೆ : ಸಿ.ಎಂ ಇಬ್ರಾಹಿಂ
ಬೆಂಗಳೂರು : ನಗರದಲ್ಲಿ ಲಾಕ್ ಡೌನ್ ಮಾಡಿದ್ರೆ ಜನರು ಸಾಯ್ತಾರೆ, ಅದರ ಬದಲಾಗಿ ಬೆಂಗಳೂರಿನಲ್ಲಿ ಸೆಕ್ಷನ್ 144 ಜಾರಿ ತರಬೇಕು ಎಂದು ಕಾಂಗ್ರೆಸ್ ಎಂಎಲ್ ಸಿ ಸಿಎಂ ಇಬ್ರಾಹಿಂ ಹೇಳಿದ್ದಾರೆ.
ಕೊರೊನಾ ಹೆಚ್ಚಳ ಹಿನ್ನೆಲೆ ಇಂದು ಸಿಎಂ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ಸಚಿವರ, ಶಾಸಕರ ಸಭೆ ನಡೆಯಿತು. ಇದರಲ್ಲಿ ಭಾಗಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಇಬ್ರಾಹಿಂ, ಕೊರೊನಾ ವಿಚಾರವಾಗಿ ರಾಜ್ಯ ಸರ್ಕಾರ ಸಂಪೂರ್ಣವಾಗಿ ಗೊಂದಲದಲ್ಲಿದೆ.
ಗಂಟು ಹಾಕಿ ಹೊಳೆಯಲ್ಲಿ ಬಿಟ್ಟಂತಾಗಿದೆ. ರಾಜ್ಯದಲ್ಲಿ ಬೆಡ್, ಆಕ್ಸಿಜನ್, ಇಂಜೆಕ್ಷನ್, ಲಸಿಕೆ ಮತ್ತು ಔಷಧಿಗಳ ಕೊರತೆ ಇದೆ. ಈ ಬಗ್ಗೆ ಸಭೆಯಲ್ಲಿ ಯಾವುದೇ ಸ್ಪಷ್ಟವಾದ ಉತ್ತರ ಸಿಗಲಿಲ್ಲ ಎಂದು ಹೇಳಿದರು.
ಇನ್ನು ಇದೇ ವೇಳೆ ಬೆಂಗಳೂರಿನಲ್ಲಿ ಲಾಕ್ ಡೌನ್ ಮಾಡುವ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಎಲ್ಲದಕ್ಕೂ ಲಾಕ್ ಡೌನ್ ಪರಿಹಾರ ಅಲ್ಲ. ಲಾಕ್ ಡೌನ್ ಮಾಡುವ ಬದಲು ಸೆಕ್ಷನ್ 144 ಹಾಕಿ. ಕೊರೊನಾದಿಂದ ಸಾವನ್ನಪ್ಪಿದ ವ್ಯಕ್ತಿಯಿಂದ ಸೋಂಕು ಹರಡಲ್ಲ ಅನ್ನೋದು ತಜ್ಞರ ಅಭಿಪ್ರಾಯ.
ಈ ರೀತಿ ಎಲ್ಲ ತಜ್ಞರ ಅಭಿಪ್ರಾಯ ಕ್ರೋಢಿಕರಿಸಿ ಜನರಿಗೆ ಕುಟುಂಬಸ್ಥರಿಗೆ ಗೌರವಯುತವಾಗಿ ಅಂತ್ಯಕ್ರಿಯೆ ಮಾಡಲು ಅವಕಾಶ ನೀಡಬೇಕು ಎಂದು ಮನವಿ ಮಾಡಿಕೊಂಡರು.