ಬೆಂಗಳೂರು : ಪೂರ್ವ ಸಿದ್ಧತೆಗಳಿಲ್ಲದೇ ಜಾರಿ ಮಾಡಲಾದ ಲಾಕ್‌ಡೌನ್ ಅನ್ನು ಈಗ ಮುನ್ನೆಚ್ಚರಿಕೆ ಇಲ್ಲದೆ ಸಡಿಲ ಮಾಡಲಾಗಿದೆ ಎಂದು ಲಾಕ್ ಡೌನ್ ಸಡಿಲಿಕೆಯ ಸರ್ಕಾರದ ನಿರ್ಧಾರದ ವಿರುದ್ಧ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಕಿಡಿಕಾರಿದ್ದಾರೆ.
ಈ ಕುರಿತು ಸರಣಿ ಟ್ವೀಟ್ ಮಾಡಿರುವ ಅವರು, ವಲಸೆ ಕಾರ್ಮಿಕರು ಊರಿಗೆ ಹೋಗಲು ಅವಕಾಶ ಮಾಡಿಕೊಟ್ಟಿರುವ ರಾಜ್ಯ ಸರ್ಕಾರ ಜನರು ಭಾರಿ ಪ್ರಮಾಣದಲ್ಲಿ ಗುಂಪುಗೂಡುವಂತೆ ಮಾಡಿದೆ. ಈ ಮೂಲಕ ಕಾರ್ಮಿಕರ ಆರೋಗ್ಯದ ವಿಚಾರದಲ್ಲಿ ಚೆಲ್ಲಾಟವಾಡುತ್ತಿದೆ.
ವಿದೇಶದಿಂದ ಸೋಂಕು ಹೊತ್ತು ಬರುವವರನ್ನೆಲ್ಲ ಬರಮಾಡಿಕೊಂಡ ಸರ್ಕಾರ ಕೊನೆಗೆ ಪೂರ್ವ ಸಿದ್ಧತೆಗಳಿಲ್ಲದೇ, ಜನರಿಗೆ ಮಾಹಿತಿ ನೀಡದೇ ಲಾಕ್‌ಡೌನ್ ಜಾರಿ ಮಾಡಿತು. ಜನರೂ ಸರ್ಕಾರದ ನಿರ್ಧಾರವನ್ನು ಪಾಲಿಸಿದ್ದಾರೆ. ಹೀಗಾಗಿ ದೇಶ ಮತ್ತು ರಾಜ್ಯದಲ್ಲಿ ಕೋವಿಡ್ ಸಂಪೂರ್ಣ ನೀಗದೇ ಹೋದರೂ, ಸಂಭವಿಸಬಹುದಾಗಿದ್ದ ದೊಡ್ಡ ಪ್ರಮಾದ ತಪ್ಪಿದೆ.
ಇಷ್ಟು ದಿನ ಸಾವಿರಾರು ಕೋಟಿ ರೂಪಾಯಿಗಳನ್ನು ನಷ್ಟ ಮಾಡಿಕೊಂಡು ಪಾಲಿಸಲಾದ ಲಾಕ್‌ಡೌನ್‌ನಿಂದ ಗಳಿಸಿಕೊಂಡಿದ್ದನ್ನು ಸರ್ಕಾರ ಒಂದು ಅವೈಜ್ಞಾನಿಕ ನಡೆಯಿಂದ ಕಳೆದುಕೊಳ್ಳಬಾರದು. ಕಾರ್ಮಿಕರು ಮತ್ತು ಹಳ್ಳಿಗಳು ಸೌಖ್ಯವಾಗಿರಬೇಕು. ಈ ನಿಟ್ಟಿನಲ್ಲಿ ಸರ್ಕಾರ ಎಲ್ಲ ರೀತಿಯ ಮುನ್ನೆಚ್ಚರಿಕಾ ಕ್ರಮಗಳನ್ನೂ ಕೈಗೊಳ್ಳಬೇಕು.
ಕಾರ್ಮಿಕರನ್ನು ಊರುಗಳಿಗೆ ತಲುಪಿಸುವುದು ಆಗಬೇಕಾದ ಕಾರ್ಯವೆ. ಆದರೆ, ಈ ಕಾರ್ಯದಲ್ಲಿ ಅವರ ಆರೋಗ್ಯಕ್ಕೆ ಅಪಾಯ ಎದುರಾಗಬಾರದು. ಅವರ ಹಿತಕ್ಕಾಗಿ ಕೈಗೊಂಡ ಈ ನಿರ್ಧಾರವೇ ಅವರಿಗೆ ಸಂಚಕಾರವಾಗಿ ಪರಿಣಮಿಸಬಾರದು. ಬಸ್‌ಗಳಲ್ಲೂ ದೈಹಿಕ ಅಂತರ ಪಾಲನೆಯಾಗಲಿ, ಸೂಕ್ತ ರೀತಿಯ ಪರೀಕ್ಷೆಗಳು ನಡೆಯಲಿ ಎಂದು ಒತ್ತಾಯಿಸಿದ್ದಾರೆ.