ಲೋಕಸಭೆಯ ಮಾನ್ಸೂನ್ ಅಧಿವೇಶನ ಪ್ರಾರಂಭ – ಅಧಿವೇಶನದಲ್ಲಿ ಹಲವಾರು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲಿದೆ: ಪ್ರಧಾನಿ
ಹೊಸದಿಲ್ಲಿ, ಸೆಪ್ಟೆಂಬರ್14: ಲೋಕಸಭೆಯ ಮಾನ್ಸೂನ್ ಅಧಿವೇಶನ ಬೆಳಗ್ಗೆ 9 ಗಂಟೆಗೆ ಪ್ರಾರಂಭವಾಗಿದೆ. ಕಲಾಪ ಆರಂಭವಾಗುತ್ತಿದ್ದಂತೆ ಸ್ಪೀಕರ್ ಓಂ ಬಿರ್ಲಾ ಅವರು ಇತ್ತೀಚೆಗೆ ನಿಧನರಾದ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಸೇರಿದಂತೆ ಅಗಲಿದ ಗಣ್ಯರಿಗೆ ಸಂತಾಪ ಸೂಚಿಸಿದರು. ಎಲ್ಲಾ ಸದಸ್ಯರೂ ಅಗಲಿದ ಗಣ್ಯರಿಗೆ ಮೌನ ಪ್ರಾರ್ಥನೆ ನಡೆಸಿ ಗೌರವ ಸಲ್ಲಿಸಿದ ನಂತರ ಕಲಾಪವನ್ನು ಒಂದು ಗಂಟೆ ಅವಧಿಗೆ ಸ್ಪೀಕರ್ ಮುಂದೂಡಿದರು.
ಮಾನ್ಸೂನ್ ಅಧಿವೇಶನ ಪ್ರಾರಂಭವಾಗುವ ಮುನ್ನ, ಉಭಯ ಸದನಗಳಲ್ಲಿ ವಿವಿಧ ವಿಷಯಗಳ ಕುರಿತು ಚರ್ಚೆಯೊಂದಿಗೆ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಪ್ರತಿಪಾದಿಸಿದರು. ಮಾನ್ಸೂನ್ ಅಧಿವೇಶನವು ಅಕ್ಟೋಬರ್ 1 ರವರೆಗೆ ಮುಂದುವರಿಯುತ್ತದೆ.
ಕೋವಿಡ್-19 ಸಾಂಕ್ರಾಮಿಕದಿಂದಾಗಿ ಮಾರ್ಚ್ನಲ್ಲಿ ಸಂಸತ್ತಿನ ಬಜೆಟ್ ಅಧಿವೇಶನದ ಅವಧಿಯನ್ನು ಮೊಟಕುಗೊಳಿಸಲಾಗಿದೆ ಎಂದು ಪ್ರಸ್ತಾಪಿಸಿದ ಪ್ರಧಾನಿ, ಈ ಮಾನ್ಸೂನ್ ಅಧಿವೇಶನವನ್ನು ಕೊರೋನಾ ಸೋಂಕು ಹರಡುವಿಕೆಯನ್ನು ತಡೆಗಟ್ಟಲು ಅಗತ್ಯವಿರುವ ಎಲ್ಲ ಆರೋಗ್ಯ ಮುನ್ನೆಚ್ಚರಿಕೆಗಳೊಂದಿಗೆ ಆಯೋಜಿಸಲಾಗುತ್ತಿದೆ ಎಂದು ಹೇಳಿದರು.
ಲೋಕಸಭೆ ಪ್ರಾರಂಭವಾಗುವ ಮೊದಲು ಮಾಧ್ಯಮಗಳೊಂದಿಗೆ ಮಾತನಾಡಿದ ಪ್ರಧಾನಿ, ಕೋವಿಡ್ ಬಿಕ್ಕಟ್ಟಿನ ಮಧ್ಯೆ ಮಾನ್ಸೂನ್ ಅಧಿವೇಶನದಲ್ಲಿ ಭಾಗವಹಿಸಿದ್ದಕ್ಕಾಗಿ ಎಲ್ಲ ಶಾಸಕರನ್ನು ಅಭಿನಂದಿಸಿದರು ಮತ್ತು ಲಸಿಕೆ ಬರುವವರೆಗೂ ಮುನ್ನೆಚ್ಚರಿಕೆ ವಹಿಸುವಂತೆ ಸಲಹೆ ನೀಡಿದರು.
ಗಡಿಯಲ್ಲಿನ ಸೈನ್ಯದ ಪ್ರಯತ್ನಗಳನ್ನು ಶ್ಲಾಘಿಸಿದ ಪ್ರಧಾನಿ, ಇಡೀ ದೇಶವು ಅವರೊಂದಿಗೆ ಇದೆ ಎಂದು ಹೇಳಿದರು.
ಉಭಯ ಸದನಗಳಲ್ಲಿ ಲೋಕಸಭೆಯು ತನ್ನ ಮೊದಲ ದಿನದ ಅಧಿವೇಶನವನ್ನು ಸೋಮವಾರ ಬೆಳಿಗ್ಗೆ 9 ರಿಂದ ಮಧ್ಯಾಹ್ನ 1 ರವರೆಗೆ ನಡೆಸಲಿದೆ. ರಾಜ್ಯಸಭೆಯು ಮಧ್ಯಾಹ್ನ 3 ರಿಂದ ಸಂಜೆ 7 ರ ವರೆಗೆ ನಡೆಯಲಿದೆ







