ರಾಜ್ಯದಲ್ಲಿ ಕಳೆದ ಕೆಲವು ದಿನಗಳಿಂದ ಪಡಿತರ ವಿತರಣೆ ಸೇರಿದಂತೆ ವಿವಿಧ ಸರಕಾರದ ಸಾಗಣೆ ಕಾರ್ಯಗಳಿಗೆ ಲಾರಿಗಳ ಲಭ್ಯತೆ ಸಮಸ್ಯೆಯಾಗಿ ಪರಿಣಮಿಸಿತ್ತು. ಕಾರಣವೇನೆಂದರೆ, ಪಡಿತರ ವಸ್ತುಗಳ ಸಾಗಣೆಗೆ ಸರ್ಕಾರ ಪಾವತಿಸಬೇಕಿದ್ದ ಹಣ ಬಿಡುಗಡೆ ಆಗದೆ ಇರೋದರಿಂದ ಲಾರಿ ಮಾಲೀಕರು ಮುಷ್ಕರ ಕೈಗೊಂಡಿದ್ದರು. ಇದರ ಪರಿಣಾಮವಾಗಿ ಹಲವು ಜಿಲ್ಲೆಗಳಲ್ಲಿ ಪಡಿತರ ವಿತರಣೆಗೆ ತೊಂದರೆ ಉಂಟಾಗಿತ್ತು.
ಲಾರಿ ಮಾಲೀಕರ ಸಂಘವು ಈ ಬಾರಿ ಸರ್ಕಾರದ ವಿರುದ್ಧ ಗಂಭೀರ ಅಸಮಾಧಾನ ವ್ಯಕ್ತಪಡಿಸಿ, ತಮ್ಮ ಸೇವೆಗಳನ್ನು ಸ್ಥಗಿತಗೊಳಿಸಿ ಮುಷ್ಕರ ಆರಂಭಿಸಿತು. ಆದರೆ ಇದೀಗ, ರಾಜ್ಯ ಸರ್ಕಾರವು ಈ ಸಮಸ್ಯೆಗೆ ಸ್ಪಂದಿಸಿ 2082.99 ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡುವ ಆದೇಶ ಹೊರಡಿಸಿದೆ. ಈ ಅನುದಾನವು ಪಡಿತರ ವಸ್ತುಗಳ ಸಾಗಣೆ ಶುಲ್ಕ ಮತ್ತು ಇತರ ಸಂಬಂಧಿತ ವೆಚ್ಚಗಳ ಖರ್ಚಿಗೆ ಬಳಸಲಾಗಲಿದೆ.
ಈ ಹಿನ್ನಲೆಯಲ್ಲಿ, ಲಾರಿ ಮಾಲೀಕರ ಸಂಘವು ತಮ್ಮ ಮುಷ್ಕರವನ್ನು ವಾಪಸ್ ಪಡೆಯುವುದಾಗಿ ಘೋಷಿಸಿದೆ. ಸಂಘದ ಪದಾಧಿಕಾರಿಗಳ ಪ್ರಕಾರ, ಸರ್ಕಾರದ ನಿರ್ಧಾರವು ಸ್ವಾಗತಾರ್ಹವಾಗಿದೆ ಮತ್ತು ತಕ್ಷಣದಿಂದ ತಮ್ಮ ಲಾರಿಗಳ ಸೇವೆಗಳನ್ನು ಪುನರಾರಂಭಿಸುತ್ತಾರೆ ಎಂದು ತಿಳಿಸಿದ್ದಾರೆ.
ಅದರೊಂದಿಗೆ ರಾಜ್ಯದ ಪಡಿತರ ವಿತರಣಾ ವ್ಯವಸ್ಥೆ ಮತ್ತೆ ಸರಿದೂಗುವ ನಿರೀಕ್ಷೆಯಿದೆ. ಲಾರಿ ಮಾಲೀಕರ ತೀರ್ಮಾನದಿಂದ ಸರ್ಕಾರದ ಅನೇಕ ಇಲಾಖೆಗಳು ಮತ್ತು ಸಾರ್ವಜನಿಕರು ಅನುಭವಿಸುತ್ತಿದ್ದ ತೊಂದರೆ ಕೊನೆಯಾಗಿದೆ.








