Love Jihad: ಮಗಳನ್ನು ಕಾಪಾಡುವಂತೆ ಪೊಲೀಸ್ ಠಾಣೆ ಮುಂದೆ ತಾಯಿ ಪ್ರತಿಭಟನೆ

1 min read
Hubli Suburban Police Station Saaksha Tv

ಲವ್ ಜಿಹಾದ್ | ಮಗಳನ್ನು ಕಾಪಾಡುವಂತೆ ಪೊಲೀಸ್ ಠಾಣೆ ಮುಂದೆ ತಾಯಿ ಪ್ರತಿಭಟನೆ

ಹುಬ್ಬಳ್ಳಿ: ರಾಜ್ಯದಲ್ಲಿ ಸಧ್ಯ ಧರ್ಮ ಯುದ್ಧ ವಿಭಿನ್ನ ರೂಪ ಪಡೆದುಕೊಳ್ಳುತ್ತಿದ್ದು, ಈ ಮಧ್ಯೆ ವಾಣಿಜ್ಯ ನಗರಿ ಹುಬ್ಬಳಿಯಲ್ಲಿ ಮತ್ತೊಂದು ಲವ್ ಜಿಹಾದ ಪ್ರಕರಣ ಕೇಳಿಬಂದಿದೆ.

ಹೇಗಾದರೂ ಮಾಡಿ ನನ್ನ ಮಗಳನ್ನು ಲವ್ ಜಿಹಾದ್ ನಿಂದ ಕಾಪಾಡಿ, ಮರಳಿ ಮನೆಗೆ ಕರೆದು ತನ್ನಿ ಎಂದು ಮಗಳ ತಾಯಿ ಮತ್ತು ಹಿಂದುಪರ ಸಂಘಟನೆಯ ಕಾರ್ಯಕರ್ತರು ಹುಬ್ಬಳ್ಳಿ ಉಪನಗರ ಪೊಲೀಸ್ ಠಾಣೆ ಎದುರು ಧರಣಿ ಮಾಡಿದ್ದಾರೆ.

ಇಬ್ರಾಹಿಂ ಮತ್ತು ಸ್ನೇಹ ಮದುವೆಯಾದ ಪ್ರೇಮಿಗಳು. ಸ್ನೇಹಳ ಅಣ್ಣ ಪವನ್ ಮೂಲಕ ಕೇಶ್ವಾಪುರದ ನಿವಾಸಿ ಇಬ್ರಾಹಿಂ ಸ್ನೇಹಾಳಿಗೆ ಪರಿಚಯವಾಗಿದ್ದಾನೆ. ಇಬ್ರಾಹಿಂ ಪ್ಲಂಬರಿಂಗ್ ಕೆಲಸ ಮಾಡಿಕೊಂಡಿದ್ದು, ಸ್ನೇಹ ಕಮರಿಪೇಟನಲ್ಲಿ ಟೈಲರಿಂಗ್ ಕೆಲಸ ಮಾಡಿಕೊಂಡಿದ್ದಳು.

ಇವರಿಬ್ಬರ ಸ್ನೇಹ, ಪ್ರೇಮಕ್ಕೆ ತಿರುಗಿದೆ. ನಂತರ ಇವರು ಮದುವೆಯಾಗಲು ನಿಶ್ಚಯಿಸಿದ್ದು, ಈ ವರ್ಷ ಫೆಬ್ರವರಿ 11 ರಂದು ಗದಗ ಉಪ ನೋಂದಣಿ ಕಚೇರಿಯಲ್ಲಿ ಮದುವೆಯಾಗಿದ್ದಾರೆ. ಈ ಮದುವೆ ಮೋಸದ ಮದುವೆ, ನನ್ನ ಮಗಳು ಲವ್ ಜಿಹಾದ್ ಗೆ ಒಳಗಾಗಿದ್ದಾಳೆ ಎಂದು ಪೋಷಕರು ಆರೋಪಿಸುತ್ತಿದ್ದಾರೆ.

ಈ ಕುರಿತು ಮಾತನಾಡಿದ ಸ್ನೇಹ ತಾಯಿ ಯಲ್ಲಮ್ಮ ನನ್ನ ಮಗಳನ್ನು ಮೋಸದಿಂದ ಮದುವೆಯಾಗಿದ್ದು, ಪ್ರೀತಿ ಹೆಸರಿನಲ್ಲಿ ಲವ್ ಜಿಹಾದ್ ಆಗಿದೆ. ಅಲ್ಲದೇ ಆಕೆ ಮದುವೆಯಾದಾಗ ಅಪ್ರಾಪ್ತೆಯಾಗಿದ್ದಳು. ಇನ್ನೂ ಮದುವೆ ದಿನ ಸ್ನೇಹ ಮನೆಯಲ್ಲಿಯೇ ಇದ್ದಳು. ಮದುವೆ ಪತ್ರದಲ್ಲಿ ನಕಲಿ ಸಹಿ ಮಾಡಿದ್ದು, ಸಹಿ ಸ್ನೇಹದಳಲ್ಲ. ಸುಳ್ಳು ದಾಖಲೆ ಸೃಷ್ಟಿ ಮಾಡಿ ಇಬ್ರಾಹಿಂ ಸ್ನೇಹಳನ್ನು ಮದುವೆಯಾಗಿದ್ದಾನೆ. ಅಲ್ಲದೇ ಈ ಮದುವೆಗೆ ಗದಗ್‌ ಸಬ್ ರಿಜಿಸ್ಟರ್ ಕುಮ್ಮಕ್ಕಿದೆ ಎಂದು ಆರೋಪಿಸಿದ್ದಾರೆ.

ಈ ಕುರಿತು ಎಪ್ರಿಲ್ 2 ರಂದು ಬೇಂಡಿಗೇರಿ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರನ್ನು ಸ್ನೇಹ ಕುಟುಂಬಸ್ಥರು ನೀಡಿದ್ದಾರೆ. ಆದರೆ ಪೊಲೀಸರು ಯಾವುದೇ ತನಿಖೆ ನಡೆಸದೇ ಪ್ರಕರಣ ಮುಚ್ಚಿಹಾಕಲು ಯತ್ನಿಸುತ್ತಿದ್ದಾರೆಂದು ಆರೋಪಿಸಿ, ಸ್ನೇಹ ಕುಟುಂಬಸ್ಥರು ಜೊತೆಗೆ ಕೆಲವು ಹಿಂದೂಪರ ಸಂಘಟನೆಗಳು ಉಪನಗರ ಠಾಣೆ ಮುಂದೆ ಬುಧವಾರ ಬೆಳಗ್ಗೆಯಿಂದ ಸಂಜೆಯ ತನಕ ಧರಣಿ ನಡೆಸಿದ್ದಾರೆ. ಧರಣಿ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ, ಎಚ್ಚೆತ್ತ ಪೊಲೀಸರು ಯುವತಿ ತಾಯಿಯಿಂದ ಮತ್ತೊಂದು ದೂರು ಪಡೆದುಕೊಂಡಿದ್ದಾರೆ.

ಸುದ್ದಿ ತಿಳಿದು ಶ್ರೀರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಬುಧವಾರ ಧರಣಿ ಸ್ಥಳಕ್ಕೆ ಆಗಮಿಸಿ ಪಾಲಕರ ಜೊತೆಗೆ ಮಾಹಿತಿ ಪಡೆದರು. ಬಳಿಕ ಮಾಧ್ಯಮಗಳಿಗೆ ಮಾತನಾಡಿದ ಮುತಾಲಿಕ್, ರಾಜ್ಯದಲ್ಲಿ ಲವ್ ಜಿಹಾದ್ ಪ್ರಕರಣಗಳು ಹೆಚ್ಚಾಗುತ್ತಿವೆ, ಬಿಜೆಪಿ ಅಧಿಕಾರದಲ್ಲಿದ್ದರೂ ಇದರ ವಿರುದ್ಧ ಕ್ರಮಕೈಗೊಳ್ಳಲಾಗುತ್ತಿಲ್ಲ. ಅವರ ಮನೆಯ ಹೆಣ್ಣು ಮಕ್ಕಳಿಗೆ ಹೀಗಾದರೆ ಅವರಿಗೆ ಬುದ್ದಿ ಬರುತ್ತೆ. ನಾಳೆ ಮಧ್ಯಾಹ್ನ 12 ಗಂಟೆಯ ತನಕ ಸಮಯ ನೀಡುತ್ತವೆ. ಒಂದು ವೇಳೆ ಯುವಕನನ್ನು ಬಂಧಿಸಿ ಯುವತಿಯನ್ನು ಕರೆತರದಿದ್ದರೆ, ಹೋರಾಟ ಹಾದಿ ಬೇರೆ ರೂಪ ಪಡೆದುಕೊಳ್ಳುತ್ತದೆ. ಮುಂದಾಗುವ ಅನಾಹುತಕ್ಕೆ ಬಿಜೆಪಿ ನಾಯಕರೇ ಕಾರಣವಾಗಲಿದ್ದಾರೆ ಎಂದು ಕಿಡಿಕಾರಿದ್ದಾರೆ.

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd