ದಾವಣಗೆರೆ: ಜೋಡಿಯೊಂದು ಪ್ರೀತಿಸಿ ಮದುವೆಯಾಗಿದ್ದಕ್ಕೆ ಯುವಕನ ಪೋಷಕರ ಮೇಲೆ ಯುವತಿಯ ಸಂಬಂಧಿಕರು ಹಲ್ಲೆ ಮಾಡಿರುವ ಘಟನೆ ನಡೆದಿದೆ.
ಈ ಘಟನೆ ಜಿಲ್ಲೆಯ ಹರಿಹರ ತಾಲೂಕಿನ ಕಮಲಾಪುರದಲ್ಲಿ ನಡೆದಿದೆ. ಆರುಂಡಿ ಬಸಪ್ಪ ಹಾಗೂ ಪತ್ನಿ ಮಲ್ಲಮ್ಮ ಎಂಬುವವರ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಲಾಗಿದೆ. ಹಲ್ಲೆ ಮಾಡಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಕುರಿತು ಮಲೇಬೆನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಕಮಲಾಪುರದ ಸಿದ್ದಾರ್ಥ ಹಾಗೂ ಸೃಷ್ಟಿ ಪ್ರೀತಿಸಿ, ಮದುವೆಯಾಗಿದ್ದರು. ಇತ್ತ ಬೇರೆ ಜಾತಿಯ ಯುವಕನೊಂದಿಗೆ ಮದುವೆಯಾಗಿರುವ ವಿಷಯ ಗೊತ್ತಾಗುತ್ತಿದ್ದಂತೆ ಪೋಷಕರು, ಸಿದ್ಧಾರ್ಥ್ ತಂದೆ ಆರುಂಡಿ ಬಸಪ್ಪ, ಪತ್ನಿ ಮಲ್ಲಮ್ಮ ಅವರ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಮೈಮೇಲಿನ ಬಟ್ಟೆ ಬಿಚ್ಚಿ ಅಮಾನುಷವಾಗಿ ಥಳಿಸಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಕುರಿತು ದೂರು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.