ಏಮ್ಸ್ ನಲ್ಲಿ ಸಂಸದೆ ಪ್ರಜ್ಞಾ ಸಿಂಗ್ ಗೆ ಚಿಕಿತ್ಸೆ : ನಾಪತ್ತೆ ಪೋಸ್ಟರ್ಗಳಿಗೆ ‘ಬಿಜೆಪಿ’ ಪ್ರತಿಕ್ರಿಯೆ
ಭೋಪಾಲ್ : ದೇಶದಲ್ಲಿ ಕೊರೊನಾ ವೈರಸ್ ಕಾಣಿಸಿಕೊಂಡು ಜನರ ಬದುಕನ್ನು ಕಿತ್ತುಕೊಳ್ಳುತ್ತಿದೆ. ಇಂತಹ ಸಂದರ್ಭದಲ್ಲಿ ಜನರ ಪರ ನಿಂತು ಅವರಿಗೆ ಧೈರ್ಯ ತುಂಬಬೇಕಿದ್ದ ಸಂಸದೆ ಪ್ರಜ್ಞಾ ಸಿಂಗ್ ಬಹಿರಂಗವಾಗಿ ಎಲ್ಲಿಯೂ ಕಾಣಿಸಿಕೊಂಡಿಲ್ಲ. ಇದರಿಂದ ಬೇಸರಗೊಂಡ ಭೋಪಾಲ್ ಜನರು, ಸಂಸದೆ ಎಲ್ಲಿದ್ದಾರೆ? ಠಾಕೂರ್ ನಾಪತ್ತೆಯಾಗಿದ್ದಾರೆ ಎಂಬೆಲ್ಲಾ ಪೋಸ್ಟರ್ ಗಳನ್ನು ಎಲ್ಲಾ ಕಡೆ ಅಂಟಿಸಿದ್ದಾರೆ.
ಇದೀಗ ಈ ಬಗ್ಗೆ ಬಿಜೆಪಿ ಪ್ರತಿಕ್ರಿಯೆ ನೀಡಿದ್ದು, ಪ್ರಜ್ಞಾ ಸಿಂಗ್ ಅವರು ಏಮ್ಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿಸಿದೆ. “ಪ್ರಜ್ಞಾ ಸಿಂಗ್ ನಾಪತ್ತೆಯಾಗಿಲ್ಲ. ಅವರು ಅನಾರೋಗ್ಯಕ್ಕೀಡಾಗಿದ್ದು, ದೆಹಲಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಲ್ಲದೆ ಅವರು ಕಾರ್ಯಕರ್ತರ ಜೊತೆ ಫೋನ್ ಮೂಲಕ ನಿರಂತರ ಸಂಪರ್ಕದಲ್ಲಿದ್ದಾರೆ. ಈ ಮೂಲಕ ಪ್ರವಾಸಿ ಕಾರ್ಮಿಕರಿಗೆ ಸಹಾಯ ಮಾಡುತ್ತಿದ್ದಾರೆ. ಅಲ್ಲದೆ ಲಾಕ್ ಡೌನ್ ನಿಂದಾಗಿ ಕಷ್ಟು ಪಡುತ್ತಿರುವವರಿಗೆ ಹಾಗೂ ವಿದ್ಯಾರ್ಥಿಗಳಿಗೂ ತಮ್ಮ ಕೈಲಾದಷ್ಟು ಸಹಾಯ ಮಾಡುತ್ತಿದ್ದಾರೆ ಎಂದು ತಿಳಿಸಿದೆ ಕೇಸರಿ ಪಡೆ.
ಇನ್ನು ಈ ಬಗ್ಗೆ ಬಿಜೆಪಿ ವಕ್ತಾರ ರಾಹುಲ್ ಕೊತಾರಿ ಪ್ರತಿಕ್ರಿಯಿಸಿ, ಪ್ರಜ್ಞಾ ಸಿಂಗ್ ಅವರು ಕ್ಯಾನ್ಸರ್ ನಿಂದ ಬಳಲುತ್ತಿದ್ದು, ದೆಹಲಿಯ ಏಮ್ಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ ಅವರ ಕ್ಷೇತ್ರದಲ್ಲಿ ಜನರಿಗೆ ಬೇಕಾದ ಆಹಾರ, ದಿನಸಿ ಮೊದಲಾದ ಅಗತ್ಯ ವಸ್ತುಗಳನ್ನು ಇಂದಿಗೂ ಪೂರೈಕೆ ಮಾಡಲಾಗುತ್ತಿದೆ ಎಂದರು.








