ಮಧ್ಯಪ್ರದೇಶ ರಾಜಕೀಯ ಬಿಕ್ಕಟ್ಟು ಹಿನ್ನೆಲೆ ಟ್ರಬಲ್ ಶೂಟರ್ ಡಿ.ಕೆ ಶಿವಕುಮಾರ್ ಅವರು ತಮ್ಮ ಆಟ ಶುರು ಮಾಡಿದ್ದಾರೆ. ಮಧ್ಯಪ್ರದೇಶ್ ಸಿಎಂ ಕಮಲ್ ನಾಥ್ ಸೋಮವಾರ ವಿಶ್ವಾಸಮತಯಾಚನೆಗೆ ಸಿದ್ಧ ಎಂದ ಬೆನ್ನಲ್ಲೆ ಟ್ರಬಲ್ ಶೂಟರ್ ಅಖಾಡಕ್ಕಿಳಿದಿದ್ದು, ಬೆಂಗಳೂರಿನಲ್ಲಿರುವ ಕಾಂಗ್ರೆಸ್ ಶಾಸಕರನ್ನು ರೆಸಾರ್ಟ್ ನಿಂದ ಆಚೆತರುವ ಪ್ರಯತ್ನ ಮಾಡಿದ್ದಾರೆ. ಮಧ್ಯಪ್ರದೇಶದ ಕಾಂಗ್ರೆಸ್ ಶಾಸಕರನ್ನು ಅಕ್ರಮವಾಗಿ ದಿಗ್ಭಂಧನದಲ್ಲಿಟ್ಟಿದ್ದಾರೆಂದು ಆರೋಪಿಸಿ ಡಿ.ಕೆ.ಶಿವಕುಮಾರ್ ಇಂದು ಡಿಜಿಪಿಗೆ ದೂರು ಸಲ್ಲಿಸಿದ್ದಾರೆ.
ಮಧ್ಯಪ್ರದೇಶದ ಕಾಂಗ್ರೆಸ್ ಶಾಸಕ ಮನೋಜ್ ಚೌಧರಿಯನ್ನು ಕರೆತಂದು ಬೆಂಗಳೂರಿನಲ್ಲಿ ಅಕ್ರಮವಾಗಿ ಇರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಮನೋಜ್ ಚೌಧರಿ ಅವರ ತಂದೆ ನಾರಾಯಣ ಚೌಧರಿ ಮಗನನ್ನು ಹುಡುಕಿಕೊಂಡು ಬೆಂಗಳೂರಿಗೆ ಬಂದಿದ್ದರು. ತಮ್ಮ ಮಗ ಕರೆ ಮಾಡಿ ನನ್ನನ್ನು ದಿಗ್ಬಂಧನದಲ್ಲಿಟ್ಟಿದ್ದಾರೆ, ಬಂದು ನನ್ನನ್ನು ಬಿಡಿಸಿಕೊಂಡು ಹೋಗಿ ಎಂದು ಹೇಳಿದ್ದಾರಂತೆ. ಹೀಗಾಗಿ ನಾರಾಯಣ ಚೌಧರಿ ಬೆಂಗಳೂರಿಗೆ ಬಂದಿದ್ದಾರೆ. ಆದರೆ ಪೊಲೀಸರು ಮಾತ್ರ ಮಗನ ಭೇಟಿಗೆ ಅವಕಾಶ ನೀಡುತ್ತಿಲ್ಲ ಎಂದು ನಾರಾಯಣ ಚೌಧರಿ ಅವರು ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ ಡಿ.ಕೆ.ಶಿವಕುಮಾರ್ ಅವರು ನಾರಾಯಣ ಚೌಧರಿ ಜೊತೆಗೆ ಡಿಜಿಪಿ ಕಚೇರಿ ತೆರಳಿ ಎಡಿಜಿಪಿ ಅಮರ್ ಕುಮಾರ್ ಪಾಂಡೆಗೆ ದೂರು ನೀಡಿದ್ದಾರೆ.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ ಶಿವಕುಮಾರ್, ಬಿಜೆಪಿಯವರು ಏನು ಬೇಕಾದರೂ ಮಾಡಿಕೊಳ್ಳಲಿ. ಆದರೆ ಮಗನ ಭೇಟಿಗೆ ಅಪ್ಪನಿಗೂ ಅವಕಾಶ ಕೊಡದೇ ಇರುವುದು ನಿಜಕ್ಕೂ ಆತಂಕಕಾರಿ ವಿಚಾರ. ಆದಷ್ಟು ಬೇಗ ಅವರಿಗೆ ಮಗನ ಭೇಟಿಗೆ ಅವಕಾಶ ಮಾಡಿಕೊಡಬೇಕೆಂದು ಡಿ.ಕೆ.ಶಿವಕುಮಾರ್ ಒತ್ತಾಯಿಸಿದ್ದಾರೆ.









