ಬೆಂಗಳೂರು : ಮರಾಠಿ ಮಾತನಾಡುವ ಜನರಿಗಾಗಿ ಹಮ್ಮಿಕೊಂಡಿರುವ ಆರೋಗ್ಯ ಯೋಜನೆಯನ್ನು ಮಹಾರಾಷ್ಟ್ರ (Maharashtra) ಸರ್ಕಾರವು ಬೆಳಗಾವಿ ಸೇರಿದಂತೆ ಇನ್ನಿತರ ಗಡಿ ಪ್ರದೇಶದ 865 ಗ್ರಾಮಗಳಿಗೆ ವಿಸ್ತರಣೆ ಮಾಡಿ ಆದೇಶ ಹೊರಡಿಸಿದೆ.
ಬೆಳಗಾವಿ, ಕಾರವಾರ, ಕಲಬುರ್ಗಿ ಮತ್ತು ಬೀದರ್ ಗಡಿ ವ್ಯಾಪ್ತಿಯ 865 ಗ್ರಾಮಗಳನ್ನು ಆರೋಗ್ಯ ಯೋಜನೆಯಡಿ ಸೇರಿಸಲಾಗಿದೆ ಎಂದು ಅಲ್ಲಿಯ ಸರ್ಕಾರ ತಿಳಿಸಿದೆ. ಸರ್ಕಾರದಿಂದ ಗುರುತಿಸಲ್ಪಟ್ಟ 996 ರೀತಿಯ ಚಿಕಿತ್ಸೆಗಳಿಗೆ ವರ್ಷಕ್ಕೆ 1.50 ಲಕ್ಷ ರೂಪಾಯಿಗಳವರೆಗೆ ವೈದ್ಯಕೀಯ ವಿಮೆಯನ್ನು ಈ ಜನರು ಪಡೆಯಲಿದ್ದಾರೆ.
ಬೆಳಗಾವಿ ಗಡಿ ವಿಚಾರದಲ್ಲಿ ಉಭಯ ರಾಜ್ಯಗಳ ನಡುವೆ ಸಂಘರ್ಷ ಇದ್ದು, ಇದೀಗ ಮಹಾರಾಷ್ಟ್ರ ಸರ್ಕಾರ ಕೈಗೊಂಡಿರುವ ನಿರ್ಧಾರ ಮತ್ತಷ್ಟು ವಿವಾದಕ್ಕೆ ಕಾರಣವಾಗಲಿದೆ. ಬೆಳಗಾವಿ ಗಡಿ ಪ್ರದೇಶದಲ್ಲಿ ಮರಾಠಿ ಮಾತನಾಡುವ ಜನರಿಗಾಗಿ ಹಮ್ಮಿಕೊಂಡಿರುವ ಆರೋಗ್ಯ ಯೋಜನೆಯನ್ನು ಕರ್ನಾಟಕ ಸರ್ಕಾರ ತಡೆಯಲು ಮುಂದಾದರೂ ನಾವದನ್ನು ಹೇಗಾದರೂ ಮಾಡಿ ಜಾರಿಗೊಳಿಸಲು ಪ್ರಯತ್ನಿಸುತ್ತೇವೆ ಎಂದು ಮಹಾರಾಷ್ಟ್ರದ ಶಾಸಕ ಶಂಭುರಾಜ್ ದೇಸಾಯಿ ಇತ್ತೀಚೆಗೆ ಹೇಳಿದ್ದರು. ಇದು ಎರಡು ರಾಜ್ಯಗಳ ವಾಕ್ಸಮರಕ್ಕೆ ಕಾರಣವಾಗುತ್ತಿದೆ.








