Maharashtra – ಔರಂಗಾಬಾದ್, ಒಸ್ಮಾನಾಬಾದ್ ನಗರಗಳ ಹೆಸರು ಬದಲಿಸಿದ ಏಕನಾಥ್ ಶಿಂಧೆ ಸಂಪುಟ
ಮಹಾರಾಷ್ಟ್ರದ ಏಕನಾಥ್ ಶಿಂಧೆ ನೇತೃತ್ವದ ಸರ್ಕಾರ ಶನಿವಾರ ಔರಂಗಾಬಾದ್ ಮತ್ತು ಒಸ್ಮಾನಾಬಾದ್ ನಗರಗಳನ್ನು ಕ್ರಮವಾಗಿ ಛತ್ರಪತಿ ಸಂಭಾಜಿನಗರ ಮತ್ತು ಧರಾಶಿವ್ ಎಂದು ಮರುನಾಮಕರಣ ಮಾಡಲು ಸಂಪುಟ ಅನುಮೋದನೆ ನೀಡಿದೆ.
ಮುಖ್ಯಮಂತ್ರಿ ಸ್ಥಾನಕ್ಕೆ ಉದ್ಧವ್ ಠಾಕ್ರೆ ರಾಜೀನಾಮೆ ನೀಡುವುದಕ್ಕೂ ಮುಂಚಿತವಾಗಿ ಈ ಆದೇಶ ಹೊರಡಿಸಿತ್ತು. ಇದೀಗ ಮುಖ್ಯಮಂತ್ರಿ ಏಕನಾಥ್ ಶಿಂದೆ ನೇತೃತ್ವದಲ್ಲಿ ನಡೆದ ಸಚಿವ ಸಂಪುಟದಲ್ಲಿ ಮರುನಾಮಕರಣ ನಿರ್ಧಾರ ಕೈಗೊಳ್ಳಲಾಗಿದೆ. ಠಾಕ್ರೆ ನೇತೃತ್ವದ ಸರ್ಕಾರ ತೆಗೆದುಕೊಂಡಿದ್ದ ನಿರ್ಧಾರ ಕಾನೂನಾತ್ಮಕವಾಗಿರಲಿಲ್ಲ, ಇದೀಗ ನಮ್ಮ ಸರ್ಕಾರ ತೆಗೆದುಕೊಂಡಿರುವ ಮರುನಾಮಕರಣ ನಿರ್ಧಾರ ಕಾನೂನಾತ್ಮಕವಾಗಿದೆ. ಇದಕ್ಕೆ ಸಂಬಂಧಿಸಿದಂತೆ ಹೊಸ ಪ್ರಸ್ತಾವನೆ ರಾಜ್ಯಪಾಲರಿಗೆ ಕಳುಹಿಸಲಾಗುವುದು ಎಂದಿರುವ ಶಿಂದೆ, ನವಿ ಮುಂಬೈ ವಿಮಾನ ನಿಲ್ದಾಣಕ್ಕೆ ಡಿ.ಬಿ ಪಾಟೀಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಎಂದು ನಾಮಕರಣ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಕಳೆದ ತಿಂಗಳು ಉದ್ಧವ್ ಠಾಕ್ರೆ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯಲ್ಲಿ ಔರಂಗಾಬಾದ್ ಅನ್ನು ಸಂಭಾಜಿನಗರ ಎಂದು ಮರುನಾಮಕರಣ ಮಾಡಲಾಯಿತು, ಆದರೆ ಶಿಂಧೆ ಸರ್ಕಾರ ಶನಿವಾರ ಅದಕ್ಕೆ ‘ಛತ್ರಪತಿ’ ಪೂರ್ವಪ್ರತ್ಯಯವನ್ನು ಸೇರಿಸಿದೆ. ಸದ್ಯಕ್ಕೆ ಶಿಂಧೆ ಮತ್ತು ಫಡ್ನವಿಸ್ ಸಂಪುಟದಲ್ಲಿ ಇಬ್ಬರೇ ಸದಸ್ಯರಾಗಿದ್ದು, ಸಂಪುಟ ವಿಸ್ತರಣೆ ಇನ್ನೂ ಬಾಕಿ ಇದೆ.