Maharashtra – Karnataka ಗಡಿ ವಿವಾದ – ಕಾನೂನು ತಜ್ಞರ ಜೊತೆ ಸಿ ಎಂ ಚರ್ಚೆ…
ಮಹಾರಾಷ್ಟ್ರ – ಕರ್ನಾಟಕ ಗಡಿ ವಿವಾದದ ಕುರಿತು ಸುಪ್ರೀಂ ಕೋರ್ಟ್ ನಲ್ಲಿ ಇಂದು ವಿಚಾರಣೆ ನಡೆಯುವ ಸಾಧ್ಯತೆ ಇದೆ. ಇದರ ಜೊತೆ ದೆಹಲಿ ಪ್ರವಾಸದಲ್ಲಿರುವ ಸಿ ಎಂ ಬಸವರಾಜ್ ಬೊಮ್ಮಾಯಿ ಅವರು ದೆಹಲಿಯಲ್ಲಿ ಕಾನೂನು ತಜ್ಞರೊಂದಿಗೆ ಗಡಿ ವಿವಾದ ಸಂಬಂಧ ಸಮಾಲೋಚನೆ ನಡೆಸಿದ್ದಾರೆ.
ಗಡಿ ವಿವಾದದ ಕುರಿತು ತೀರ್ಪು ಪ್ರಕಟಿಸಬೇಕಿರುವ ನ್ಯಾಯಮೂರ್ತಿ ಕೆ. ಎಂ. ಜೋಸೆಫ್, ಸುಪ್ರೀಂ ಕೋರ್ಟ್ ನ ಮತ್ತೊಂದು ಪೀಠದಲ್ಲಿ ಕಾರ್ಯ ನಿರ್ವಹಿಸಬೇಕಾಗಿರುವುದರಿಂದ ಮಹಾರಾಷ್ಟ್ರ – ಕರ್ನಾಟಕದ ಗಡಿ ವಿವಾದದ ವಿಚಾರಣೆ ಇಂದು ನಡೆಯುವ ಸಾಧ್ಯತೆ ಕಡಿಮೆ ಎಂದು ಮೂಲಗಳು ತಿಳಿಸಿವೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕೇಂದ್ರ ಸಚಿವರಾದ ಪಿಯೂಷ್ ಗೋಯಲ್ , ಭೂಪೇಂದ್ರ ಯಾದವ್, ರಾಜನಾಥ್ ಸಿಂಗ್ ಅವರನ್ನು ಭೇಟಿ ಮಾಡಿ ರಾಜ್ಯದ ವಿವಿಧ ಯೋಜನೆಗಳ ಕುರಿತು ಚರ್ಚೆ ನಡೆಸಿದರು.
ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರನ್ನು ಭೇಟಿ ಮಾಡಿದ ಮುಖ್ಯಮಂತ್ರಿ, ಬೆಳಗಾವಿಯಲ್ಲಿ ರಕ್ಷಣಾ ಇಲಾಖೆಯ ವಶದಲ್ಲಿರುವ 732 ಎಕರೆ ಪ್ರದೇಶವನ್ನು ರಾಜ್ಯಕ್ಕೆ ಹಸ್ತಂತರಿಸುವಂತೆ ರಕ್ಷಣಾ ಪ್ರಾಧಿಕಾರಕ್ಕೆ ಸೂಕ್ತ ನಿರ್ದೇಶನ ನೀಡಲು ಮನವಿ ಮಾಡಿದರು. ಸೈನಿಕ ಶಾಲೆ ಉದ್ಘಾಟನೆಗೆ ರಕ್ಷಣಾ ಸಚಿವರಿಗೆ ಆಹ್ವಾನ ನೀಡಿದರು.
ಸಚಿವ ಪಿಯೂಷ್ ಗೋಯಲ್ ಅವರನ್ನು ಭೇಟಿ ಮಾಡಿ, ರಾಜ್ಯದ ಕಲಬುರಗಿ, ತುಮಕೂರು ಮತ್ತು ವಿಜಯಪುರ ಜಿಲ್ಲೆಗಳಲ್ಲಿ ಕೇಂದ್ರ ಸರ್ಕಾರದ ಮಿತ್ರಾ ಯೋಜನೆಯಡಿ ಮೆಗಾ ಜವಳಿ ಪಾರ್ಕ್ ಸ್ಥಾಪನೆಗೆ ಅನುದಾನ ಒದಗಿಸುವಂತೆ ಮುಖ್ಯಮಂತ್ರಿ ಮನವಿ ಸಲ್ಲಿಸಿದರು.
Maharashtra – Karnataka border dispute – CM talks with legal experts…