ಮಹಾರಾಷ್ಟ್ರದಲ್ಲಿ ‘ಮಹಾ’ ಮಳೆ : ಪ್ರವಾಹ – ರೈಲುಗಳಲ್ಲಿ ಸಿಲುಕಿ 6,000 ಪ್ರಯಾಣಿಕರ ಪರದಾಟ
ನೆರೆಯ ಮಾಹಾರಾಷ್ಟ್ರದಲ್ಲಿ ಬಾರೀ ಮಳೆಯಾಗ್ತಾಯಿದ್ದು, ಜನರ ಜೀವನ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿದೆ.. ಮಹಾರಾಷ್ಟ್ರಕ್ಕೆ ಒಂದು ರೀತಿ ಮಳೆ ಹಾಗೂ ಕೊರೊನಾ ಶಾಪವಾಗಿದ್ದು, ಮಳೆಯ ಪ್ರಬಾವೂ ಇಲ್ಲಿಯೇ ಹೆಚ್ಚಾಗಿ ಬೀರಿದ್ರೆ , ಕೊರೊನಾ ಪರಿಣಾಮವನ್ನ ಹೆಚ್ಚಾಗಿ ಅನುಭವಿಸಿದ ರಾಜ್ಯವೂ ಇದೇ ಆಗಿದೆ..
ಮಹಾರಾಷ್ಟ್ರದಲ್ಲಿ ವರುಣನ ಅಬ್ಬರಕ್ಕೆ ಜನಜೀವನ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿದೆ.. ಆದ್ರೆ ವರುಣ ಮಾತ್ರ ಶಾಂತನಾಗುವ ಲಕ್ಷಣ ಕಾಣುತ್ತಿಲ್ಲ.. ಧಾರಾಕಾರ ಮಳೆಗೆ ಜನ ಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.. ರಸ್ತೆಗಳು ಕೆರೆಯಂತೆ ಮಾರ್ಪಾಡಾಗಿವೆ.. ಅಲ್ಲಲ್ಲೆ ಗೋಡೆ ಕುಸಿತ ಭೂಮಿ ಕುಸಿತದಿಂದಾಗಿ ಹಲವರ ಜೀವ ಹೋಗಿದೆ.. ಈಗಾಗಲೇ ಮುಂಜಾಗ್ರತಾ ಕ್ರಮವಾಗಿ ಮುಂಬೈನಲ್ಲಿ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ.. ಇದೀಗ ರತ್ನಗಿರಿ ಜಿಲ್ಲೆಯ ಕೊಂಕಣ ರೈಲ್ವೆ ಮಾರ್ಗದ ರೈಲು ಸಂಚಾರ ಅಸ್ತವ್ಯಸ್ತಗೊಂಡಿದ್ದು, ಸುಮಾರು 6,000 ಪ್ರಯಾಣಿಕರು ವಿವಿಧ ರೈಲುಗಳಲ್ಲಿ ಸಿಲುಕಿಕೊಂಡಿದ್ದಾರೆ.
ನದಿ ಉಕ್ಕಿ ಹರಿಯುತ್ತಿರುವುದರಿಂದ ಹಳಿಗಳು ಜಲಾವೃತಗೊಂಡಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದುವರೆಗೆ 9 ರೈಲುಗಳ ಸೇವೆಯನ್ನು ನಿಯಂತ್ರಿಸಲಾಗಿದೆ. ಅಂದರೆ, ಕೆಲ ರೈಲುಗಳ ಸಂಚಾರವನ್ನು ಅರ್ಧಕ್ಕೆ ಸ್ಥಗಿತಗೊಳಿಸಲಾಗಿದ್ದರೆ, ಕೆಲ ರೈಲುಗಳ ಸಂಚಾರ ರದ್ದು ಮಾಡಲಾಗಿದೆ. ಮತ್ತೆ ಕೆಲವು ರೈಲುಗಳ ಮಾರ್ಗ ಬದಲಿಸಲಾಗಿದೆ.
ಈ ರೈಲುಗಳು ವಿವಿಧ ನಿಲ್ದಾಣಗಳಲ್ಲಿ ಸುರಕ್ಷಿತ ಸ್ಥಳಗಳಲ್ಲಿವೆ. ಅವುಗಳಲ್ಲಿದ್ದ ಪ್ರಯಾಣಿಕರು ಸಹ ಸುರಕ್ಷಿತರಾಗಿದ್ದಾರೆ. ಅವರಿಗೆ ಆಹಾರ ಮತ್ತು ನೀರು ಪೂರೈಕೆ ಮಾಡಲಾಗುತ್ತಿದೆ ಎಂದು ಕೊಂಕಣ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ. ಭಾರಿ ಮಳೆಯ ಪರಿಣಾಮ ರತ್ನಗಿರಿಯ ಚಿಪ್ಲುನ್ ಮತ್ತು ಕಾಮಥೆ ನಿಲ್ದಾಣಗಳ ನಡುವಿನ ವಶಿಷ್ಠ ನದಿ ಸೇತುವೆಯಲ್ಲಿ ನೀರಿನ ಮಟ್ಟವು ಅಪಾಯದ ಮಟ್ಟ ಮೀರಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಯಾಣಿಕರ ಸುರಕ್ಷತೆಯ ದೃಷ್ಟಿಯಿಂದ, ಈ ವಿಭಾಗದಲ್ಲಿ ರೈಲು ಸೇವೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಹೇಳಿದ್ದಾರೆ. ರೈಲ್ವೆ ಅಧಿಕಾರಿಗಳ ಪ್ರಕಾರ, ಕೊಂಕಣ ರೈಲ್ವೆ ಮಾರ್ಗದ ವಿವಿಧ ನಿಲ್ದಾಣಗಳಲ್ಲಿ 5,500-6,000 ಪ್ರಯಾಣಿಕರು ರೈಲುಗಳಲ್ಲಿ ಸಿಲುಕಿಕೊಂಡಿದ್ದಾರೆ.
ಚಿಪ್ಲುನ್ ನಲ್ಲಿನ ಪ್ರವಾಹ ಪರಿಸ್ಥಿತಿಯಿಂದಾಗಿ, ಇದುವರೆಗೆ 9 ದೂರದ ರೈಲುಗಳನ್ನು ನಿಯಂತ್ರಿಸಲಾಗಿದೆ ಎಂದು ಕೊಂಕಣ ರೈಲ್ವೆ ಮಾಹಿತಿ ನೀಡಿದೆ. ಈ ಪೈಕಿ ದಾದರ್-ಸಾವಂತ್ವಾಡಿ ವಿಶೇಷ ರೈಲು ಚಿಪ್ಲುನ್ ನಿಲ್ದಾಣದಲ್ಲಿ ಮತ್ತು ಖೇಡ್ ನಿಲ್ದಾಣದಲ್ಲಿ ಸಿಎಸ್ಎಂಟಿ-ಮಡ್ಗಾಂವ್ ಜನತಾಬ್ಡಿ ವಿಶೇಷ ರೈಲುಗಳನ್ನು ನಿಯಂತ್ರಿಸಲಾಗಿದೆ.
ಈ ರೈಲುಗಳಲ್ಲಿನ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ ಎಂದು ಕೊಂಕಣ ರೈಲ್ವೆ ವಕ್ತಾರ ಗಿರೀಶ್ ಕರಂದಿಕರ್ ಹೇಳಿದ್ದಾರೆ. ಇನ್ನೂ ಕೊಂಕಣ ರೈಲ್ವೆ ಮಾರ್ಗದ ರೈಲುಗಳಲ್ಲಿ ಸಿಲುಕಿರುವ ಪ್ರಯಾಣಿಕರಿಗೆ ಆಹಾರ ಮತ್ತು ನೀರನ್ನು ಒದಗಿಸಲಾಗ್ತಿದೆ. ಎಲ್ಲ ಪ್ರಯಾಣಿಕರಿಗೆ ಚಹಾ, ತಿಂಡಿ ಮತ್ತು ನೀರು ಒದಗಿಸಲು ನಾವು ವ್ಯವಸ್ಥೆ ಮಾಡಿದ್ದೇವೆ ಎಂದು ಕರಂಡಿಕರ್ ಹೇಳಿದ್ದಾರೆ.